ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಮರಣ ಮೃದಂಗ ಭಾರಿ ಪ್ರಮಾಣದಲ್ಲಿ ಮುಂದುವರಿಸುತ್ತಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 115 ಮಂದಿಯನ್ನು ಬಲಿಪಡೆದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,153ಕ್ಕೆ (ಅನ್ಯಕಾರಣಕ್ಕೆ 6ಮಂದಿ ಸೇರಿ) ಏರಿಕೆಯಾಗಿದೆ.
ಕೊರೊನಾಗೆ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 75 ಸೋಂಕಿತರು ಸೇರಿ ರಾಜ್ಯದಲ್ಲಿ ಒಟ್ಟು 115 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2,208 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 3,693 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55,115ಕ್ಕೇರಿಕೆಯಾಗಿದೆ.
24 ಗಂಟೆಗಳಲ್ಲಿ 1,028 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 33,205 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.