ಬೆಂಗಳೂರು: ರಾಜ್ಯದಲ್ಲಿ 4537 ಮಂದಿ ಇಂದು ಕೊರೊನಾ ಸೋಂಕಿಗೆ ಒಳಗಾಗಿದ್ದು, ಕೋವಿಡ್ -19 ತನ್ನ ಅಟ್ಟಹಾಸವನ್ನು ಸರವೇಗದಲ್ಲೇ ಮುಂದುವರಿಸುತ್ತಿದೆ. ಜತೆಗೆ ಮರಣ ಮೃದಂಗ ಮುಂದುವರಿದಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 93 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಒಂಟ್ಟು 1246ಕ್ಕೆ ( ಅನ್ಯಕಾರಣಕ್ಕೆ 6 ಸೇರಿ) ಏರಿಕೆಯಾಗಿದೆ.
ಕೊರೊನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 49 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 93 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2125 ಇನ್ನು ದಕ್ಷಿಣ ಕನ್ನಡ 509 ಧಾರವಾಡದಲ್ಲಿ 186, ಬಳ್ಳಾರಿಯಲ್ಲಿ 155, ಬೆಳಗಾವಿಯಲ್ಲಿ 137, ವಿಜಯಪುರ 175 ಹಾಗೂ ಯಾದಗಿರಿಯಲ್ಲಿ 4 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ರಾಜ್ಯದಲ್ಲಿ ಒಟ್ಟು 4537 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 59,652ಕ್ಕೇರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 1018 ಮಂದಿ ಸೋಂಕಿನಿಂದ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 22,498 ಸಕ್ರಿಯ ಪ್ರಕರಣಗಳು ಸೇರಿ ರಾಜ್ಯದಲ್ಲಿ ಒಟ್ಟು 36,631 ಸಕ್ರಿಯ ಪ್ರಕರಣಗಳಿವೆ.