ಬೆಂಗಳೂರು: 2015ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿಯನ್ನು ನೀಡಲು ನಿರಾಕರಿಸುತ್ತಿರುವುದು ಸರಿಯಲ್ಲ. ಇದರಿಂದಾಗಿ ಕೆಪಿಎಸ್ಸಿ ಏನನ್ನೋ ಬಚ್ಚಿಡಲು ಪ್ರಯತ್ನಿಸುತ್ತಿದೆ ಎಂಬ ಗುಮಾನಿ ಮೂಡಲು ಕಾರಣವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉತ್ತರ ಪತ್ರಿಕೆಯ ಪ್ರತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಕರ್ನಾಟಕ ಲೋಕಸೇವಾ ಆಯೋಗ ಕೂಡಾ ಇಂತಹದ್ದೇ ಆದೇಶ ನೀಡಿದೆ. ಹೀಗಿರುವಾಗ ಕೆಪಿಎಸ್ಸಿ ವಿನಾಕಾರಣ ಅಭ್ಯರ್ಥಿಗಳನ್ನು ಸತಾಯಿಸುತ್ತಿರುವುದು ಸರಿ ಅಲ್ಲ. ತಕ್ಷಣ ಅವರಿಗೆ ಉತ್ತರ ಪತ್ರಿಕೆಯ ಪ್ರತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.