ಬೆಂಗಳೂರು: ಕೊರೊನಾ ಸೋಂಕಿನ ಹೆಸರಿನಲ್ಲಿ ಸುಮಾರು 2000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಲೂಟಿ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೊನಾ ಮಹಾಮಾರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆ ಹೆಸರಿನಲ್ಲಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ಲೂಟಿ ಹೊಡೆದಿದೆ ಕೊರೊನಾ ಪೀಡಿತರನ್ನು ಸರಿಯಾಗಿ ನೋಡಿಕೊಳ್ಳಲು ಆಗದ ಸರ್ಕಾರ ಇದುವರೆಗೂ 4164 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕೊರೊನಾ ಸಂಬಂಧಿ ವಸ್ತುಗಳನ್ನು ಖರೀದಿಸಿರುವುದಾಗಿ ಲೆಕ್ಕ ಕೊಟ್ಟಿದೆ. ಆದರೆ ಇದರಲ್ಲಿ ಭಾರಿ ಮೊತ್ತ ಅವ್ಯವಹಾರ ನಡೆದಿದೆ ಎಂದು ದೂರಿದ್ದಾರೆ.
ತಮಿಳುನಾಡು ಸರ್ಕಾರ ತಲಾ ಒಂದು ವೆಂಟಿಲೇಟರ್ ಖರೀದಿಗೆ 4.78 ಲಕ್ಷ ರೂ. ಕೊಟ್ಟು ಕೊಂಡುಕೊಂಡಿದೆ. ಅದರಂತೆ ಕೇಂದ್ರ ಸರ್ಕಾರ 4 ಲಕ್ಷ ರೂ. ಕೊಟ್ಟು ಖರೀದಿಸಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ 5.68 ಲಕ್ಷ ರೂ. ಕೊಟ್ಟು ಒಂದು ಬಾರಿ ಖರೀಸಿದ್ದು, ಮತ್ತೊಂದು ಬಾರಿಗೆ 12.30 ಲಕ್ಷ ರೂ.ಗೂ ನಂತರ 18 ಲಕ್ಷ ರೂ. ನೀಡಿ ಖರೀದಿಸಿದ್ದಾರೆ ಎಂದು ಸಿದ್ದು ಆರೋಪಿಸಿದ್ದಾರೆ.
ಪಿಪಿಇ ಕಿಟ್, ಮಾಸ್ಕ್, ಸ್ವಾನಿಟೈಸರ್ ಸೇರಿ ವಿವಿಧ ಕಿಟ್‌ಗಳನ್ನು 4164 ಕೋಟಿ ರೂ.ಗೆ ಖರೀದಿ ಮಾಡಿರುವುದಾಗಿ ಸರ್ಕಾರ ಲೆಕ್ಕಕೊಟ್ಟಿದೆ. ಆದರೆ ಒಂದು ಪಿಪಿಇ ಕಿಟ್ ಗೆ ಮಾರುಕಟ್ಟೆ ದರವಿರುವುದು 330 ರೂ. ಮಾತ್ರ ಆದರೆ ಸರ್ಕಾರ ಕೊಟ್ಟಿರುವುದು 2117 ರೂ.ಗಳು ಇದರಿಂದ ಅವರು ಕೊರೊನಾ ಹೆಸರಿನಲ್ಲಿ ಹೇಗೆ ಲೂಟಿ ಮಾಡಿದ್ದಾರೆ ಎಂಬುವುದು ತಿಳಿಯುತ್ತಿದೆ ಎಂದು ಕಿಡಿಕಾರಿದ್ದಾರೆ.