ಮೈಸೂರು: ಕೊರೊನಾ ಸೋಂಕಿತನೊಬ್ಬ ಕೋವಿಡ್ ಪರೀಕ್ಷೆ ವೇಳೆ ಮಾಹಿತಿಗಾಗಿ ತನ್ನ ಫೋನ್ ನಂಬರ್ ಕೊಡುವ ಬದಲು ಮೈಸೂರು ಜಿಲ್ಲಾಧಿಕಾರಿ ನಂಬರ್ ಕೊಟ್ಟಿದ್ದ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೆಬ್ಬಾಳ್ ನಿವಾಸಿಯೊಬ್ಬ ಮೂಗು ಮತ್ತು ಗಂಟಲು ದ್ರವ ಸಂಗ್ರಹ ಕೇಂದ್ರದಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದ. ಆತನ ವಿಳಾಸ ಮೊಬೈಲ್ ನಂಬರ್ ಇನ್ನಿತರ ಮಾಹಿತಿ ಕಲೆ ಹಾಕುವ ವೇಳೆ ತನ್ನ ನಂಬರ್ ಬದಲಿಗೆ ಜಿಲ್ಲಾಧಿಕಾರಿ ಫೋನ್ ನಂಬರ್ ಕೊಟ್ಟು ಅಧಿಕಾರಿಗಳನ್ನು ಯಾಮಾರಿಸಿ ಹೋಗಿದ್ದಾನೆ.
ಎರಡು ಮೂರು ದಿನ ಕಳೆದು ಬಂದ ಈತನ ಕೋವಿಡ್ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದರಿಂದ ಅಧಿಕಾರಿಗಳು ಫೋನ್ ಕರೆ ಮಾಡಿ ಸಂಪರ್ಕಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿದ ನಂತರವೇ ಅಧಿಕಾರಿಗಳಿಗೆ ಸತ್ಯ ತಿಳಿದಿದ್ದು ಅವರು ಅಚ್ಚರಿಗೆ ಒಳಗಾಗಿದ್ದಾರೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಈ ಬಗ್ಗೆ ಪ್ರತಿಕ್ರಿಯಿಸಿ ಕಂಟ್ರೋಲ್ ರೂಮ್ ನಿಂದ ಕರೆ ಮಾಡಿ ಸಾರ್ ನಿಮಗೆ ಕೋವಿಡ್ ಪಾಸಿಟಿವ್ ಬಂದಿದೆ. ಕ್ವಾರಂಟೈನ್‌ಗೆ ಒಳಗಾಗಿ ಎಂದು ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯ ಆಯಿತು. ನಾನು ಜಿಲ್ಲಾಧಿಕಾರಿ ಮಾತನಾಡುತ್ತಿರುವುದು ಎಂದು ಅಧಿಕಾರಿಗಳಿಗೆ ತಿಳಿಸಿದೆ. ಮಾಹಿತಿ ಸಂಗ್ರಹಿಸುವ ವೇಳೆ ಆ ವ್ಯಕ್ತಿ ನನ್ನ ನಂಬರ್ ಕೊಟ್ಟಿರುವುದಾಗಿ ಅಧಿಕಾರಿ ತಿಳಿಸಿದರು.
ಕ್ವಾರಂಟೈನ್ ಗೆ ಒಳಗಾಗುವುದು ಮತ್ತು ಆಸ್ಪತ್ರೆಗೆ ದಾಖಲಾಗುವುದರಿಂದ ತಪ್ಪಿಸಿಕೊಳ್ಳಲು ಕೆಲವರು ಏನೆಲ್ಲಾ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂಬುದನ್ನು ಅರಿತು ಒಂದು ಕ್ಷಣ ನನಗೆ ಅಚ್ಚರಿಯಾಯಿತು. ಜತೆಗೆ ನಗುಕೂಡ ಬಂತು ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಸಹಕರಿಸಬೇಕು ಸೂಕ್ತ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದು, ಒಂದು ವೇಳೆ ಸಂಪರ್ಕಿಸುವ ಮಾಹಿತಿ ತಪ್ಪಿದ್ದರೆ ಸೋಂಕಿತರು ಮತ್ತು ಅವನ ಪ್ರಾಥಮಿಕ ಸೆಕೆಂಡರಿ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸುವುದು ತುಂಬಾ ಕಷ್ಟ ಎಂದು ಹೇಳಿದರು.
ಕೋವಿಡ್ ಪರೀಕ್ಷೆಗೆ ಒಳಗಾಗುವವರು ಈ ರೀತಿ ಅಧಿಕಾರಿಗಳ ದಾರಿ ತಪ್ಪಿಸುವ ಕೆಲಸ ಬಿಟ್ಟುಕೊರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಧಿಕಾರಿಗಳಿಗೆ ತುಂಬ ಮುಖ್ಯವಾಗಿರುತ್ತದೆ ಎಂದು ಡಿಸಿ ತಿಳಿಸಿದ್ದಾರೆ.