ತಿ.ನರಸೀಪುರ: ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಡನಹಳ್ಳಿ ಗ್ರಾಮದ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರ ಮನೆಗೆ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಮನೆಗಳನ್ನು ಸೀಲ್‌ಡೌನ್ ಮಾಡಿದ್ದಾರೆ.
ಕಳೆದ ನಾಲ್ಕು ದಿನದ ಹಿಂದೆ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ನಂತರ ಶುಕ್ರವಾರ (ಜುಲೈ 7) ಮಹಿಳೆಯೊಬ್ಬರಿಗೆ ಸೋಂಕು ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಆ ಸೋಂಕಿತರನ್ನು ಮೈಸೂರಿನ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಮನೆಯವರಿಗೆ ಸೋಂಕಿನ ಬಗ್ಗೆ ತಿಳಿವಳಿಕೆ ನೀಡಿ ಮನೆಯಿಂದ ಹೊರ ಬಾರದಂತೆ ತಿಳಿಸಿದ್ದಾರೆ.
ಇನ್ನು ಅವರ ಮನೆಯವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಅವರ ಗಂಟಲು ದ್ರವವನ್ನು ಕೋವಿಡ್ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.
ಇದೇ ಗ್ರಾಮದ ವ್ಯಕ್ತಿಗೆ 15ದಿನದ ಹಿಂದೆ ಕೊರೊನಾ ಸೋಂಕು ತಗುಲಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಕೊರೊನಾ ಸೋಂಕು ಗೆದ್ದುಬಂದಿದ್ದು ಆರೋಗ್ಯವಾಗಿದ್ದಾರೆ.
ಇನ್ನು ಮಾರಗೌಡನಹಳ್ಳಿಯ ವ್ಯಕ್ತಿಗೆ ಕೊರೊನಾ ಸೋಂಕು ದೃಡಪಟ್ಟಿದೆ, ಅದೇ ರೀತಿ ಬನ್ನೂರು ಟೌನ್‌ನಲ್ಲೂ ಸೋಂಕಿತರು ಪತ್ತೆಯಾಗಿದ್ದಾರೆ. ಅವರನ್ನೂ ಸಹ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರೊನಾ ಗ್ರಾಮಗ್ರಾಮಕ್ಕೂ ಹಬ್ಬುತ್ತಿದ್ದು, ಜನರು ಅತ್ಯಂತ ಜಾಗರೂಕರಾಗಬೇಕಿದೆ. ನಾವು ಹಳ್ಳಿಯಲ್ಲಿ ಇದ್ದೇವೆ ನಮಗೆ ಕೊರೊನಾ ಸೋಂಕು ಬರುವುದಿಲ್ಲ ಎಂಬ ಭ್ರಮೆಯನ್ನು ಬಿಟ್ಟು ಆರೋಗ್ಯದ ಕಡೆಗೆ ಹೆಚ್ಚಿನ ಗಮನಕೊಡಬೇಕಿದೆ.