ಬೆಂಗಳೂರು: ನಿನ್ನೆ ರಾತ್ರಿ ಪುಲಕೇಶಿ ವಿಧಾನಸಭಾ ಕ್ಷೇತ್ರದ ಕೆಜಿ ಹಳ್ಳಿ ಪೊಲೀಸ್ ಠಾಣೆಯ ಬಳಿ ಧರ್ಮ ನಿಂದನೆ ಮಾಡಿದ ವ್ಯಕ್ತಿಯನ್ನು ಬಂಧಿಸಲು ಒತ್ತಾಯಿಸಿ ನಡೆದಂತಹ ಘಟನೆ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಧಾರ್ಮಿಕ ಸಾಮರಸ್ಯ, ಶಾಂತಿ, ಸಹಬಾಳ್ವೆಗೆ ಭಾರತದಲ್ಲಿಯೇ ಮಾದರಿಯಾಗುವಂತಹ ನಗರಗಳಲ್ಲಿ ಬೆಂಗಳೂರು ಅಗ್ರಗಣ್ಯವಾಗಿದೆ. ಈ ಪ್ರತಿಷ್ಠೆಗೆ ಭಂಗ ತರುವಂತಹ ಈ ರೀತಿಯ ಘಟನೆಗಳು ಯಾವುದೇ ಕಾರಣಕ್ಕೂ ಜರುಗ ಬಾರದು. ರಾಜ್ಯ ಗೃಹ ಇಲಾಖೆಯ ಆಂತರಿಕ ಬೇಹುಗಾರಿಕ ವಿಭಾಗವು ನಿಷ್ಕ್ರಿಯಗೊಂಡಿದೆ ಎಂಬುದು ಈ ಮೂಲಕ ಸಾಬೀತಾಗುತ್ತದೆ.
ಕೊರೊನಾ ಮಹಾ ಭೀತಿಯ ಸಂದರ್ಭದಲ್ಲಿ ನರಳುತ್ತಿರುವ ನಾಗರಿಕ ಸಮಾಜ ಈ ರೀತಿಯ ಕ್ಷೋಭೆಗಳಿಂದ ಮತ್ತಷ್ಟು ಆತಂಕಕ್ಕೆ ಒಳಗಾಗುವ ಸಂದರ್ಭವನ್ನು ರಾಜ್ಯ ಗೃಹ ಇಲಾಖೆಯು ಮುತುವರ್ಜಿ ವಹಿಸಿಕೊಂಡು ತಪ್ಪಿಸಬೇಕಿದೆ ಎಂದು ಆಗ್ರಹಿಸಿದೆ.
ಯಾವುದೇ ಕಾರಣಕ್ಕೂ ಪ್ರಚೋದನೆ ನೀಡುವಂತಹ ಹಾಗೂ ಶಾಂತಿ ಕದಡುವಂತಹ ಶಕ್ತಿಗಳು ದಮನವಾಗಬೇಕಿದೆ. ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
ನಾಗರಿಕ ಸಮಾಜ ಶಾಂತಿ – ನೆಮ್ಮದಿಯಿಂದ ಸುರಕ್ಷಿತವಾಗಿ ಬದುಕುವಂತಹ ವಾತಾವರಣ ಸೃಷ್ಟಿಯಾಗಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ನಾಯಕರು ಒಕ್ಕೊರಿನಿಂದ ಆಗ್ರಹಿಸಿದ್ದಾರೆ.