ಬೆಂಗಳೂರು: ಕಾರಿನ ಡೋರ್‌ಗೆ ಬೈಕ್ ಡಿಕ್ಕಿಕೊಡೆದ ಪರಣಾಮ ಕೆಳಗೆ ಬಿದ್ದ ಬೈಕ್ ಸವಾರ ಮಹಿಳೆ ಮೇಲೆ ಬಿಎಂಟಿಸಿ ಬಸ್ ಹರಿದು ಆಕೆ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ನಡೆದಿದೆ.
ಕಾಮಕ್ಷಿಪಾಳ್ಯ ನಿವಾಸಿ ಸರೋಜಾ (42) ಎಂಬುವರೆ ಅವಘಡದಲ್ಲಿ ಮೃತಪಟ್ಟವರು. ಜ್ಞಾನಭಾರತಿಯಲ್ಲಿ ಮದುವೆ ಇದ್ದಿದ್ದರಿಂದ ಅದನ್ನು ಮುಗಿಸಿಕೊಂಡು ಸಹೋದರನ ಜೊತೆ ಮಹಿಳೆ ವಾಪಸ್ ಮನೆಗೆ ಹೋಗುತ್ತಿದ್ದಾಗ ಈ ದುರಂತ ನಡೆದಿದೆ.
ಘಟನೆ ಏನು? ಬೈಕ್ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಮುಂದೆ ನಿಂತಿದ್ದ ಕಾರಿನ ಡೋರ್ ಅನ್ನು ಸಡೆನ್‌ಆಗಿ ತೆಗೆಯಲಾಗಿ ಇದರಿಂದ ಡೋರ್‌ಗೆ ಬೈಕ್ ಡಿಕ್ಕಿಯಾಗಿ ಮಹಿಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಸರೋಜಾ ಅವರ ಮೇಲೆ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಕುಡಿದ ಮತ್ತಿನಲ್ಲಿ ರೈಲ್ವೆ ನಿಲ್ದಾಣದೊಳಕ್ಕೆ ಕಾರು ನುಗ್ಗಿಸಿದ ಭೂಪ – ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರೈಲ್ವೆ ನಿಲ್ದಾಣದೊಳಕ್ಕೆ ಕಾರು ನುಗ್ಗಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ತಡರಾತ್ರಿ ಘಟನೆ ಸಂಭವಿಸಿದೆ. ರೈಲ್ವೆ ಪ್ಲಾಟ್‌ಫಾರ್ಮ್ ಮೇಲಿಂದ ರೈಲ್ವೆ ಹಳಿಗಳ ಮೇಲೆ ಅಪ್ಪಳಿಸಿದೆ. ಪರಿಣಾಮವಾಗಿ ಕಾರು ಮತ್ತು ರೈಲ್ವೆ ಹಳಿಗೆ ಡ್ಯಾಮೇಜ್ ಆಗಿದೆ.
ಕಾರು ಮಾಲೀಕ ರಾಕೇಶ್ ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಈ ಅವಾಂತರ ಸೃಷ್ಟಿಸಿದ್ದಾನೆ. ರೈಲ್ವೆ ಪೊಲೀಸರು ಜೆಸಿಬಿ ಸಹಾಯದಿಂದ ಕಾರು ತೆರವುಗೊಳಿಸಿದ್ದಾರೆ. ರಾಕೇಶ್‌ನನ್ನು ವಶಕ್ಕೆ ಪಡೆದಿರುವ ಬಂಗಾರಪೇಟೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.