ಸಾರಿಗೆ ನೌಕರರ ಬೇಡಿಕೆ ಈಡೇರದಿದ್ದರೆ ಮುಷ್ಕರ ಅನಿವಾರ್ಯ : ವಿಜಯ ಭಾಸ್ಕರ್ ಎಚ್ಚರಿಕೆ
ಹುಬ್ಬಳ್ಳಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬ ನಿಟ್ಟಿನಲ್ಲಿ ಹಕ್ಕೊತ್ತಾಯ ಮಂಡಿಸಲಾಗಿದೆ. ಬೇಡಿಕೆಗಳು ಈಡೇರದೇ ಹೋದಲ್ಲಿ ಮುಷ್ಕರ ನಡೆಸುವುದು ಅನಿವಾರವಾಗಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯ ವಿಜಯ ಭಾಸ್ಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇದೇ ನ.7ರಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಬೃಹತ್ ಸಮಾವೇಶವನ್ನು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಬಸವೇಶ್ವರ ನಗರದ ಗೋಕುಲ ರಸ್ತೆಯಲ್ಲಿರುವ ಡಾ.ಕೆ. ಎಸ್. ಶರ್ಮಾ ಸಭಾ ಭವನ ಆಯೋಜಿಸಿತ್ತು.
ಮೂಲ ವೇತನಕ್ಕೆ ಬಿಡಿಎ ವಿಲೀನಗೊಳಿಸಿ ಪರಿಷ್ಕೃತ ಮೂಲ ವೇತನದ ಶೇ.25 ಹೆಚ್ಚಳ ಮಾಡಿ ವೇತನ ಶ್ರೇಣಿ ಸಿದ್ದಪಡಿಸಬೇಕು. ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಮುಷ್ಕರ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೆ ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಈ ಜಂಟಿ ಸಮಿತಿಯು ವಾಯವ್ಯ ಮತ್ತು ಈಶಾನ್ಯ ನಿಗಮಗಳಲ್ಲಿ ಗುತ್ತಿಗೆ ಪದ್ಧತಿಯ ಮೂಲಕ ಸಿಬ್ಬಂದಿಗಳನ್ನು ನೇಮಿಸುವುದನ್ನು ನಿಲ್ಲಿಸಬೇಕು. ನಿಗಮಗಳಿಗೆ ಸೇರಿರುವ 41 ಮಾರ್ಗಗಳನ್ನು ಖಾಸಗಿಯವರಿಗೆ ಕೊಡುವುದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಇಂದು ಬೆಲೆ ಏರಿಕೆ ಮತ್ತಿತರ ಕಾರಣಗಳಿಂದ ಸಾರಿಗೆ ನಿಗಮಗಳ ನೌಕರರು ಜೀವನ ನಡೆಸುವುದೇ ಕಷ್ಟವಾಗಿದೆ. ನಾವು ನಮ್ಮ ಜಂಟಿ ಕ್ರಿಯಾ ಸಮಿತಿ ವತಿಯಿಂದ 10 ಅಂಶಗಳ ಬೇಡಿಕೆಗಳ ಪ್ರಣಾಳಿಕೆಯನ್ನು 08.08.2022 ರಂದು ಸಾರಿಗೆ ನಿಗಮಗಳ ಆಡಳಿತ ವರ್ಗಕ್ಕೆ ಕೊಟ್ಟಿದ್ದೇವೆ. ವೇತನ, ಬಾಟ ಇತ್ಯಾದಿಗಳ ಹೆಚ್ಚಳ, ಉತ್ತಮ ವೈದ್ಯಕೀಯ ಸೌಲಭ್ಯ, ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿಗದಿ ಪಡಿಸುವುದು (ಫಾರಂ-4).
ಮಹಿಳಾ ನೌಕರರಿಗೆ ಸಂಬಂಧಪಟ್ಟ ಕೆಲವು ಬೇಡಿಕೆಗಳು, ಉತ್ತಮವಾದ ಪೆನ್ಶನ್, ಕೈಗಾರಿಕಾ ಒಪ್ಪಂದಗಳಂತೆ ಗ್ರಾಚ್ಯುಯಿಟಿ ಕೊಡುವುದು ಹಾಗೂ ಮುಷ್ಕರದ ಸಂದರ್ಭದಲ್ಲಿ ವಜಾ ಆಗಿರುವ ಎಲ್ಲ ನೌಕರರನ್ನು ಬೇಷರತ್ತಾಗಿ ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳುವುದು ಮುಂತಾದ ಬೇಡಿಕೆಗಳ ಬಗ್ಗೆ ಕೆ.ಎಸ್.ಆರ್.ಟಿ.ಸಿ ಆಡಳಿತ ವರ್ಗಕ್ಕೆ ವಿವರವಾಗಿ ತಿಳಿಸಿದ್ದೇವೆ. ಆದರೆ ಈವರೆಗೂ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ.
ಹೀಗಾಗಿ ಮುಂದಿನ ದಿನದಲ್ಲಿ ವೇತನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.