ಬನ್ನೂರು: ಪ್ರೀತಿಸಿದ ಯುವತಿಯ ಸಹವಾಸಕ್ಕೆ ಹೋದರೆ ನಿಮ್ಮ ಮಗನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಮನೆಬಳಿ ಹೋಗಿ ಪಾಲಕರ ಜತೆ ಗಲಾಟೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದರಿಂದ ಮರ್ಯಾದೆಗೆ ಅಂಜಿ ನಂದಿನಿ ಪಾರ್ಲರ್ ನಡೆಸುತ್ತಿದ್ದ ಯುವಕನೊಬ್ಬ (ಮಾ.13) ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇತುಪುರದಲ್ಲಿ ನಡೆದಿದೆ.
ಬನ್ನೂರು ಹೋಬಳಿಯ ಕೇತುಪುರದ ನಿವಾಸಿ ಯಾಚೇನಹಳ್ಳಿಯಲ್ಲಿ ನಂದಿನಿ ಪಾರ್ಲರ್ ನಡೆಸುತ್ತಿದ್ದ ಪ್ರವೀಣ (23) ಎಂಬ ಯುವಕನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.
ತನ್ನ ಗ್ರಾಮದ ಸಮೀಪವಿರುವ ಕಗ್ಗಲೀಪುರದ ಯುವತಿಯೊಬ್ಬಳನ್ನು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರವೀಣ ಮದುವೆಯಾಗುವುದಾಗಿ ಹೇಳಿದ್ದರಂತೆ. ಆದರೆ, ಮಂಗಳವಾರ ರಾತ್ರಿ ವಿಷಯ ತಿಳಿದ ಯುವಕರಿದ್ದ ಗುಂಪೊಂದು ಪ್ರವೀನ್ ಮನೆ ಬಳಿ ಬಂದು ಗಲಾಟೆ ಮಾಡಿದೆ. ಅಲ್ಲದೆ ಯಾಚೇನಹಳ್ಳಿಯಲ್ಲಿರುವ ಯುವಕನ ಭಾವನ ಬಳಿಯೂ ಕೂಡ ಈ ಗುಂಪು ಗಲಾಟೆ ಮಾಡಿ ಬಂದಿತ್ತು ಎನ್ನಲಾಗಿದೆ.
ಇನ್ನು ನನ್ನಿಂದ ಊರಿನಲ್ಲಿ (ಕೇತುಪುರದಲ್ಲಿ) ಅಪ್ಪ ಅಮ್ಮನಿಗೆ ಅವಮಾನವಾಯಿತು. ಇದಿಷ್ಟೇ ಅಲ್ಲದೆ ಭಾವನಿಗೂ ಅವಮಾನವಾಯಿತು ಎಂದು ನೊಂದುಕೊಂಡ ಪ್ರವೀಣ್ ಇಂದು ಬೆಳಗ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಈತನ ಆತ್ಮಹತ್ಯೆಗೆ ಪೊಲೀಸ್ ಸಿಬ್ಬಂದಿ ಒಬ್ಬರೂ ಕಾರಣ ಎಂದು ಆರೋಪ ಕೇಳಿ ಬಂದಿದೆ. ಪೊಲೀಸ್ ಸಿಬ್ಬಂದಿ ಪ್ರದೀಪ್ ಕಾಳೇಗೌಡ ಎಂಬುವರು ತನ್ನ ಮೊಬೈಲ್ ಫೋನ್ ಮೂಲಕ ಪ್ರವೀಣ್ ಮತ್ತು ಈತನ ಭಾವ ಹೊನ್ನೇಗೌಡ ಅವರಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದರು. ಅವರು ಫೋನ್ ಮಾಡಿ ಬದರಿಕೆ ಹಾಕಿರುವ ಆಡಿಯೋ ಕೂಡ ಇದೆ ಎನ್ನಲಾಗಿದೆ.
ಘಟನೆಯ ವಿಷಯ ತಿಳಿಯುತ್ತದ್ದಂತೆ ಬನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬನ್ನೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇನ್ನು ಘಟನೆ ಸಂಬಂಧ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.