ಮೈಸೂರು: ನಗ್ನಳಾಗಿ ವಿಡಿಯೋ ಕಾಲ್ ಮಾಡಿದ ಯುವತಿ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್‌ಮೇಲ್
ಮೈಸೂರು: ಅಪರಿಚಿತ ಯುವತಿಯೊಬ್ಬಳು ಯುವಕನೊಬ್ಬನಿಗೆ ವಾಟ್ಸ್ ಆಪ್ ವಿಡಿಯೋ ಕಾಲ್ ಮಾಡಿ ಅದರಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿದ್ದಾಳೆ. ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ವಾಸು ಎಂಬುವರಿಗೆ ಅಪರಿಚಿತ ಯುವತಿಯೊಬ್ಬಳು ವಿಡಿಯೋ ಕಾಲ್ ಮಾಡಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಇದರಿಂದ ವಾಸು ಗಾಬರಿಗೊಂಡು ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಾಸು ನೀಡಿದ ಹೇಳಿಕೆ ಪ್ರಕಾರ ವಿಡಿಯೋ ಕಾಲ್‌ಗೂ ಮೊದಲು ಮೆಸೇಜ್ ಮಾಡಿ ತನ್ನನ್ನು ಅಮೃತಾ ಎಂದು ಪರಿಚಯ ಮಾಡಿಕೊಂಡಿದ್ದ ಯುವತಿ ಬಳಿಕ ವಿಡಿಯೋ ಕಾಲ್ ಮಾಡಿದ್ದಾಳೆ. ಆ ಬಳಿಕ ನಗ್ನಳಾಗಿದ್ದಾಳೆ. ಕೂಡಲೇ ವಿಡಿಯೋ ಕಾಲ್ ಕಟ್ ಮಾಡಿದ್ದಾನೆ ವಾಸು.
ವಾಸು ವಿಡಿಯೋ ಕಾಲ್ ಕಟ್ ಮಾಡುತ್ತಿದ್ದಂತೆ ವಿಡಿಯೋ ಕಾಲ್ ರೆಕಾರ್ಡ್ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಅದರಿಂದ ಭಯಗೊಂಡ ವಾಸು ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಯುವತಿ ಅಪರಚಿತಳೋ ಅಥವಾ ವಾಸು ಕೊಟ್ಟಿರುವ ದೂರು ಸರಿಯಿದೆಯೋ ಎಂಬುದರ ಬಗ್ಗೆ ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಿದೆ. ಆಕೆ ಏಕೆ ಕಾಲ್ ಮಾಡಿದ್ದಾಳೆ ಎಂಬುದರ ಕುರಿತು ಪೊಲೀಸರು ವಿಚಾರಣೆ ತೀವ್ರಗೊಳಿಸುತ್ತಿದ್ದಾರೆ.