ಬೆಂಗಳೂರು: ರಾಜ್ಯ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ತಲಾ ₹3 ಮತ್ತು ₹3.5 ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಬೆಂಗಳೂರಿನ ಸ್ವತಂತ್ರ ಉದ್ಯಾನವನ ಸೇರಿದಂತೆ ರಾಜ್ಯಾದ್ಯಂತ ಆಮ್ ಆದ್ಮಿ ಪಾರ್ಟಿ ಜೂನ್ 18, ಮಂಗಳವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಬಳಿಕ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ, ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ದರ ಕಡಿಮೆ ಮಾಡುವಂತೆ ಆಗ್ರಹಿಸಿ ಎಎಪಿ ಮನವಿ ಪತ್ರ ನೀಡಲಿದೆ ಎಂದು ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ ಮೋಹನ್ ದಾಸರಿ ಮಾಧ್ಯಮಕ್ಕೆ ತಿಳಿಸಿದರು.
ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ದರವನ್ನು ಭಾರಿ ಪ್ರಮಾಣದಲ್ಲಿ ದಿಢೀರ್ ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದೊಡ್ಡಿದ್ದೆ. ಗ್ಯಾರಂಟಿ ಯೋಜನೆಗಳ ಮೂಲಕ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಇನ್ನೊಂದು ಕೈಯಲ್ಲಿ ದುಪ್ಪಟ್ಟು ಹಣವನ್ನು ಕಸಿದುಕೊಳ್ಳುತ್ತಿದೆ.
ಇಂಥ ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆಯನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಎಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಮೋಹನ್ ದಾಸರಿ ಹೇಳಿದರು.