ಬೆಂಗಳೂರು ಗ್ರಾಮಾಂತರ: ಜೀವನದಲ್ಲಿ ಯಶಸ್ವಿಯಾಗಲು ಯೋಜನೆಗಳನ್ನು ರೂಪಿಸಿ, ಸಾಧಿಸುವ ಛಲದೊಂದಿಗೆ ಗುರಿಯನ್ನು ತಲುಪಬೇಕು ಹಾಗೂ ಸ್ವ ಉದ್ಯೋಗದಿಂದ ಸರ್ವತೋಮುಖ ಏಳಿಗೆಯನ್ನು ಸಾಧಿಸಬೇಕೆಂದು ಶಿಕ್ಷಾರ್ಥಿಗಳಿಗೆ ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ಜೆ.ಆನಂದ್ ಅವರು ಕಿವಿಮಾತುಗಳನ್ನು ಹೇಳಿದರು.
ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿಂದು ನಡೆದ ಎಲ್&ಟಿ ಕಂಪನಿಯ ಒಂದು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಮಯ ಪಾಲನೆ, ಶಿಸ್ತು, ನಿರಂತರ ಅಭ್ಯಾಸವನ್ನು ರೂಢಿಸಿಕೊಂಡು, ಸತತ ಪ್ರಯತ್ನದೊಂದಿಗೆ ಶ್ರಮಿಸಿದರೆ ಯಶಸ್ವಿ ಉದ್ಯಮಿಯಾಗಬಹುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಲ್ & ಟಿ ಕಂಪನಿಯ ಸೇಲ್ಸ್ ಇಂಜಿನಿಯರ್ ನಿಖಿಲ್ ಮತ್ತು ಇಂಚರಾ, ಸರ್ವೀಸ್ ಇಂಜಿನಿಯರ್ ಪ್ರಕಾಶ್ ಹಿರೇಮಠ, ಮೋಟಾರ್ ರಿವೈಂಡಿಂಗ್ ಹಾಗೂ ಪಂಪ್‌ಸೆಟ್ ರಿಪೇರಿ ತರಬೇತಿಯ ಅತಿಥಿ ಉಪನ್ಯಾಸಕ ವಿರೂಪಾಕ್ಷ, ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕಿ ವಿದ್ಯಾ ಹೊಸಮನಿ, ಹಿರಿಯ ಕಚೇರಿ ಸಹಾಯಕ ಶ್ರೀನಿವಾಸ್, ಅರುಣ್‌ಕುಮಾರ್ ಸೇರಿದಂತೆ, ಮೋಟಾರ್ ರಿವೈಂಡಿಂಗ್ ಹಾಗೂ ಪಂಪ್‌ಸೆಟ್ ರಿಪೇರಿ ತರಬೇತಿಯ ಶಿಕ್ಷಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ, ಕಾರ್ಯಾಗಾರದಲ್ಲಿ ಎಲ್&ಟಿ ಕಂಪನಿಯ ಪ್ರತಿನಿಧಿಗಳು ಕೃಷಿಗೆ ಸಂಬಂಧಿಸಿದ ಮೋಟಾರ್‌ಗಳ ಕುರಿತು ಮೋಟಾರ್ ರಿವೈಂಡಿಂಗ್ ಹಾಗೂ ಪಂಪ್‌ಸೆಟ್ ರಿಪೇರಿ ತರಬೇತಿಯ ಶಿಕ್ಷಾರ್ಥಿಗಳಿಗೆ ಮಾಹಿತಿ ನೀಡಿದರು.