ತಿ.ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಿ.ಸೀಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಕಬ್ಬಿನಗದ್ದೆಯೊಂದರಲ್ಲಿ ಇಂದು ಚಿರತೆ ಮೂರು ಮರಿಗಳಿಗೆ ಜನ್ಮನೀಡಿದ್ದು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ಕಬ್ಬು ಕಟಾವಿಗಾಗಿ ಹೋಗಿದ್ದ ವೇಳೆ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಚಿರತೆ ಮರಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಮುಂದಾದರು. ಆ ವೇಳೆ ಗ್ರಾಮಸ್ಥರು ನೀವು ಮರಿಗಳನ್ನು ತೆಗೆದುಕೊಂಡು ಹೋದರೆ ತಾಯಿ ಚಿರತೆ ಬಂದು ಗ್ರಾಮಸ್ಥರನ್ನು ಬೇಟೆಯಾಡುವುದಿಲ್ಲವೇ ಎಂದು ಆತಂಕ ವ್ಯಕ್ತಪಡಿಸಿದರು.
ಅಲ್ಲದೆ ಚಿರತೆ ಮರಿಗಳನ್ನು ಇಲ್ಲೆ ಬೋನಿನೊಳಗೆ ಹಾಕಿ ಅವುಗಳಿಗೆ ಆಹಾರ ಪೂರೈಕೆ ಮಾಡಿ ತಾಯಿ ಚಿರತೆ ಮರಿಗಳನ್ನು ಹುಡುಕೊಂಡು ಬಂದೇ ಬರುತ್ತದೆ ಆ ವೇಳೆ ಅದು ಕೂಡ ಬೋನಿಗೆ ಬೀಳುತ್ತದೆ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದರಿಂದ ಅರಣ್ಯ ಅಧಿಕಾರಿಗಳು ಚಿರತೆ ಮರಿಗಳು ಇದ್ದ ಸ್ಥಳದಲ್ಲೇ ಬೋನ್ ಇಟ್ಟಿದ್ದಾರೆ.
ವಿಷಯ ತಿಳಿದ ಕೂಡಲೇ ಕ್ಷೇತ್ರದ ಶಾಸಕರ ಅಶ್ವಿನ್‌ಕುಮಾರ್ ಅವರು ಕೂಡ ಸ್ಥಳಕ್ಕೆ ಬಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಸಾಥ್ ನೀಡುವ ಮೂಲಕ ಚಿರತೆ ಸೆರೆಹಿಡಿಯುವುದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇನ್ನು ಕಳೆದ ಸೋವಾರವಷ್ಟೇ ಗೊರನಳ್ಳಿ ಬಸ್ ನಿಲ್ದಾಣದ ಬಳಿಯ ಕಬ್ಬಿನ ಗದ್ದೆ ಮತ್ತು ತೆಂಗಿನ ತೋಟದ ಬಳಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆ ಓಡಾಡಿರುವ ಜಾಗದಲ್ಲಿ ಪರಿಶೀಲನೆ ನಡೆಸಿದರು. ಆದರೆ ಸಂಜೆವರೆಗೂ ಆ ಸ್ಥಳದಲ್ಲಿ ಶೋಧಕಾರ್ಯ ನಡೆಸಿದರು ಚಿರತೆ ಮಾತ್ರ ಅಧಿಕಾರಿಗಳ ಕಣ್ಣಿಗೆ ಬೀಳಲೇ ಇಲ್ಲ.
ಇನ್ನು ತಾಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದಿದ್ದು, ಇದರಿಂದ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬಹುತೇಕ ಎಲ್ಲ ಹೋಬಳಿಗಳ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡುತ್ತಿದೆ.
ಈ ನಡುವೆ ಶ್ರೀರಂಗಪಟ್ಟಣ ತಾಲೂಕಿನ ನೆರಲಕೆರೆ ಗ್ರಾಮದ ಹೊಸಕೆರೆ ಬಳಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿದ್ದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಮತ್ತು ರೈತ ಮಹಿಳೆರು ಕಿರುಚಿಕೊಂಡು ಓಡಾಡಿದ್ದಾರೆ. ಅವರ ಕಿರುಚಾಟದಿಂದ ಗಾಬರಿಗೊಂಡ ಚಿರತೆ ಸ್ಥಳದಿಂದ ಓಡಿಹೋಗಿದೆ. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಗ್ರಾಮದ ರೈತ ಮಹಿಳೆ ಶೋಭಾ ಸ್ವಾಮಿ ತಿಳಿಸಿದ್ದಾರೆ.
ಇನ್ನು ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ಕೊಡಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆದರೆ, ಹೋದ ಪ್ರಾಣ ಮತ್ತೆ ಬರುವುದಿಲ್ಲ. ಹೀಗಾಗಿ ಸಿಎಂ ಅರಣ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಚಿರತೆ ಓಡಾಡುವ ಸ್ಥಳಗಳಲ್ಲಿ ಸೂಕ್ಷ್ಮವಾಗಿ ಗಮನಿಸಿ ಸೆರೆ ಹಿಡಿಯುವಂತೆ ತಾಕೀತು ಮಾಡಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.