ಬೆಳಗಾವಿ: ಅಕ್ಕ-ತಮ್ಮನನ್ನು ಪ್ರೇಮಿಗಳೆಂದು ಅಂದುಕೊಂಡ 16 ಮಂದಿ ಇದ್ದ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ನೈತಿಕ ಪೊಲೀಸ್ಗಿರಿ ಮೆರೆದಿರುವ ಘಟನೆ ಜಿಲ್ಲೆಯ ಕೋಟೆ ಕೆರೆ ಆವರಣದಲ್ಲಿ ನಡೆದಿದೆ.
ಘಟನೆ ಸಂಬಂಧ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, 15 ಮಂದಿ ತಲೆಮಾರಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 24 ವರ್ಷದ ಯುವತಿ ಹಾಗೂ 21 ವರ್ಷದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ತಾಲೂಕು ನಿವಾಸಿಗಳಾದ ಸಂತ್ರಸ್ತರಿಬ್ಬರು ಯುವನಿಧಿಗೆ ಅರ್ಜಿ ಸಲ್ಲಿಸಲು ಬಂದಿದ್ದರು. ಈ ವೇಳೆ ಯುವತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, ಯುವಕ ಹಣೆ ಮೇಲೆ ತಿಲಕ ಇಟ್ಟಿದ್ದ. ಇದನ್ನು ನೋಡಿದ ಮುಸ್ಲಿಂ ಸಮುದಾಯದ ಆರೋಪಿಗಳು ಇಬ್ಬರೂ ಅನ್ಯಕೋಮಿನವರು ಎಂದು ತಮಗೆ ತಾವೆ ಅಂದುಕೊಂಡು ಈ ಇವರಿಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.
ಆ ಬಳಿಕ ಕೊಠಡಿ ಒಂದರಲ್ಲಿ ಇಬ್ಬರನ್ನೂ ಕೂಡಿ ಹಾಕಿ ಅವರ ಮೊಬೈಲ್ಗಳನ್ನು ಕಸಿದುಕೊಂಡು, ಚಿತ್ರಹಿಂಸೆ ನೀಡಿದ್ದಾರೆ. ಈ ವೇಳೆ ಯುವತಿ ಉಪಾಯ ಮಾಡಿ ತನ್ನ ಪೋಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ವಾಟ್ಸ್ಆ್ಯಪ್ನಲ್ಲಿ ಲೊಕೇಷನ್ ಶೇರ್ ಮಾಡಿದ್ದಾಳೆ.
ವಿಷಯ ತಿಳಿದ ಪೋಷಕರು ಲೈವ್ ಲೋಕೇಶನ್ ಆಧರಿಸಿ ಸ್ಥಳಕ್ಕೆ ಬಂದು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಪೋಷಕರು ಬರುತ್ತಿದ್ದಂತೆ ಪುಂಡರ ಗ್ಯಾಂಗ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದೆ. ಈ ವೇಳೆ 16 ಮಂದಿಯಲ್ಲಿ 15 ಜನ ಪರಾರಿಯಾಗಿದ್ದು, ಒಬ್ಬ ಸಿಕ್ಕಿ ಬಿದ್ದಿದ್ದಾನೆ.
ಇತ್ತ ಗಂಭೀರವಾಗಿ ಗಾಯಗೊಂಡಿರುವ ಸಹೋದರಿ, ಸಹೋದರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.