CrimeNEWSನಮ್ಮಜಿಲ್ಲೆನಮ್ಮರಾಜ್ಯ

BMTCಗೂ ಲಗ್ಗೆ ಇಟ್ಟ ಬಿಟ್‌ ಕಾಯಿನ್‌ ದಂಧೆ: 10 ಮಂದಿ ವಿಚಾರಣೆ, ಸ್ಥಳದಲ್ಲೇ ನಾಲ್ವರ ಅಮಾನತು

ವಿಜಯಪಥ ಸಮಗ್ರ ಸುದ್ದಿ

ಬಿಎಂಟಿಸಿ 20ನೇ ಘಟಕದ ಬಳಿಕ ಜಯನಗರ 4ನೇ ಘಟಕದ ಸಿಬ್ಬಂದಿಗೂ ಹೆಚ್ಚಾಗಿದೆ ಎದೆ ಬಡಿತ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೂ ಬಿಟ್‌ ಕಾಯಿನ್‌ ದಂಧೆ ಕಾಲಿಟ್ಟಿದ್ದು, ಈ ದಂಧೆಯಲ್ಲಿ ತೊಡಗಿರುವ ಆರೋಪದಡಿ ಬನಶಂಕರಿಯಲ್ಲಿರುವ ಬಿಎಂಟಿಸಿ 20ನೇ ಘಟಕದ 10 ಸಿಬ್ಬಂದಿಗಳ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆಯೇ ನಾಲ್ವರನ್ನು ಸ್ಥಳದಲ್ಲೇ ಅಮಾನತು ಮಾಡಲಾಗಿದೆ.

ಬಿಎಂಟಿಸಿ 20ನೇ ಘಟಕದ ಸಿಬ್ಬಂದಿಗಳಾದ ಮಹೇಶ್‌, ರಾಕೇಶ್‌, ಮದನ್‌, ಪವನ್‌, ನವೀನ್‌, ಸಂತೋಷ್‌ ಕುಮಾರ್‌, ವೀರೇಶ್‌ ಸೇರಿದಂತೆ 10 ಮಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಅವರಲ್ಲಿ ನಾಲ್ಕು ಮಂದಿಯನ್ನು ಅಮಾನತು ಮಾಡಲಾಗಿದೆ. ಇನ್ನು ಉಳಿದವರ ಬಗ್ಗೆ ಎಂಡಿ ಸತ್ಯವತಿ ಅವರಿಗೆ ವರದಿ ಕಳುಹಿಸಿದ್ದು, ಇಂದು ಅಥವಾ ನಾಳೆ ಆ ಏಳು ಮಂದಿಯೂ ಅಮಾನತಾಗುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಈ ಬಿಟ್‌ ಕಾಯಿನ್‌ ದಂಧೆಯಲ್ಲಿ ಜಯನಗರದ ಟಿ.ಬ್ಲಾಕ್‌ನಲ್ಲಿರುವ ಬಿಎಂಟಿಸಿ 4ನೇ ಘಟಕದ ಸಿಬ್ಬಂದಿಯೂ ತೊಡಗಿದ್ದು, ಅವರ ವಿಚಾರಣೆಯನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ. ಹೀಗಾಗಿ ಈ ದಂಧೆಯಲ್ಲಿ ತೊಡಗಿರುವ 4ನೇ ಘಟಕದ ಸಿಬ್ಬಂದಿಗಳಿಗೂ ಎದೆ ಬಡಿತ ಜೋರಾಗಿದೆ.

20ನೇ ಘಟಕದಲ್ಲಿ ನಡೆದ ವಿಚಾರಣೆ: ಬಿಎಂಟಿಸಿ ದಕ್ಷಿಣ ವಿಭಾಗದ 20ನೇ ಘಟಕದ ಕೆಲವು ಸಿಬ್ಬಂದಿಗಳು ಬಿಟ್‌ ಕಾಯಿನ್‌ ದಂಧೆಯಲ್ಲಿ ಶಾಮೀಲಾಗಿದ್ದು, ಅಕೌಂಟ್‌ನಲ್ಲಿ ಲಕ್ಷಾಂತರ ಹಣವನ್ನು ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ ದಾಳಿ ನಡೆಸಿದ ಸಂಸ್ಥೆಯ ಸಹಾಯಕ ಭದ್ರತಾಧಿಕಾರಿ ರಮ್ಯಾ ಅವರು ಕೃತ್ಯದಲ್ಲಿ ತೊಡಗಿದವರ ವಿಚಾರಣೆ ನಡೆಸಿದರು.

ಈ ವೇಳೆ ಘಟಕದಲ್ಲಿರುವ ಕೆಲ ಸಿಬ್ಬಂದಿ ಕೂಡ ಬಿಟ್‌ ಕಾಯಿನ್‌ ದಂಧೆಗೆ ತೊಡಗಿರುವ ಜತೆಗೆ ತಮ್ಮ ಸಹೋದ್ಯೋಗಿಗಳಿಗೂ ಈ ದಂಧೆಯಲ್ಲಿ ತೊಡಗುವಂತೆ ಪ್ರಚೋದನೆ ನೀಡುತ್ತಿದ್ದರು ಎಂಬ ಕೃತ್ಯ ಬಯಲಾಗಿದೆ.

ಇನ್ನು ಘಟಕದಲ್ಲಿರುವ ಜ್ಯೂನಿಯರ್‌ ಅಸಿಸ್ಟೆಂಟ್‌ಗಳೇ ಹೆಚ್ಚಾಗಿ ಇದರಲ್ಲಿ ತೊಡಗಿದ್ದಾರೆಂಬ ಮಾಹಿತಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರಿಗೆ ಅವರದೇ ಮೂಲಗಳಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ಕಲೆ ಹಾಕಿ ಕ್ರಮ ಕೈಗೊಳ್ಳುವಂತೆ ಸಹಾಯಕ ಭದ್ರತಾಧಿಕಾರಿ ರಮ್ಯಾ ಅವರಿಗೆ ಸೂಚಿಸಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ರಮ್ಯಾ ಅವರು ಶನಿವಾರ ನೇರವಾಗಿ 20ನೇ ಘಟಕಕ್ಕೆ ಬಂದು ಜ್ಯೂನಿಯರ್‌ ಅಸಿಸ್ಟೆಂಟ್‌ಗಳು ಸೇರಿಂದತೆ 10 ಮಂದಿಯನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಿ ಅವರ ಅಕೌಂಟ್‌ನಲ್ಲಿನ ವ್ಯವಹಾರ ಪರಿಶೀಲಿಸಿದಾಗ ಬಿಟ್‌ ಕಾಯಿನ್‌ ಹಗರಣದಲ್ಲಿ ಶಾಮೀಲಾಗಿರುವುದು ಬಟಾ ಬಯಲಾಗಿದೆ.

ಬಿಟ್‌ ಕಾಯಿನ್‌ ದಂಧೆಯಲ್ಲಿ ತೊಡಗಿದ ಹಣ ಯಾವುದು?: ಘಟಕದ ಚಾಲಕರು ಮತ್ತು ನಿರ್ವಾಹಕರಿಂದ ರಜೆ ಮಂಜೂರು ಮಾಡುವುದು ಸೇರಿದಂತೆ ಇತರೆ ಕೆಲಸಕ್ಕಾಗಿ ಲಂಚವಾಗಿ ಪಡೆದ ಹಣವನ್ನು ಇದಕ್ಕೆ ಹೂಡಿಕೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಅಷ್ಟೇ ಅಲ್ಲ, ಘಟಕದ ಸಿಬ್ಬಂದಿಯನ್ನು ಈ ದಂಧೆಗೆ ತೊಡಗಿಸಿ ಅವರಿಂದಲೂ ಹಣ ಇನ್ವೆಸ್ಟ್‌ ಮಾಡಿಸಿ ಅದರಿಂದಲೂ ಲಾಭ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಚಾರಣೆಗೊಳಪಟ್ಟ ಒಬ್ಬೊಬ್ಬರ ಅಕೌಂಟ್‌ನಲ್ಲೂ ಲಕ್ಷಾಂತರ ಹಣ ಡಿಪಾಸಿಟ್‌ ಆಗಿರುವುದನ್ನು ರಮ್ಯಾ ಪತ್ತೆ ಹಚ್ಚಿದ್ದಾರೆ.

ದಂಧೆಯ ಕಿಂಗ್‌ ಪಿನ್‌ ಯಾರು? ಬಿಎಂಟಿಸಿ ಘಟಕ -33 ರಲ್ಲಿರುವ ಧನಂಜಯ್‌ ಎಂಬಾತನೆ ಈ ಬಿಟ್‌ ಕಾಯಿನ್‌ ದಂಧೆಯ ಕಿಂಗ್‌ ಪಿನ್‌ ಎನ್ನಲಾಗಿದೆ. ಆತನ ಅಕೌಂಟ್‌ನಲ್ಲಿ ಸುಮಾರು 30 ಲಕ್ಷ ರೂ. ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಇನ್ನು ವೇತನ ಪಡೆಯುವ ಅಕೌಂಟ್‌ನಲ್ಲಿ ವೇತನ ಹಣ ಬಿಟ್ಟು ಬೇರೆ ಬೇರೆ ಹಣದ ವ್ಯವಹಾರ ಮಾಡಬೇಕಾದರೆ ಘಟಕ ವ್ಯವಸ್ಥಾಪಕರ ಅನುಮತಿ ಬೇಕು ಎಂಬ ಬಗ್ಗೆ ಸಂಸ್ಥೆಯ ಸುತ್ತೋಲೆ 1484ರ ನಿಯಮ ಹೇಳುತ್ತದೆ. ಆದರೆ ಈ ನಿಯಮವನ್ನೇ ಉಲ್ಲಂಘನೆ ಮಾಡಿ ಬೇರೆ ಹಣದ ವ್ಯವಹಾರ ನಡೆಸಿದ್ದಾರೆ. ಹೀಗಾಗಿ ಇದರ ಆಧಾರದ ಮೇಲೆಯೇ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಬಿಎಂಟಸಿ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸತ್ಯವತಿ ಅವರು ಭ್ರಷ್ಟ ಅಧಿಕಾರಿಗಳು ಮತ್ತು ನೌಕರರ ಹೆಡೆಮುರಿಕಟ್ಟುವಲ್ಲಿ ನಿರತರಾಗಿದ್ದು, ಯಾವುದೇ ಡಿಪೋಗಳ ಚಾಲಕರು ಮತ್ತು ನಿರ್ವಾಹಕರು ಒಂದೇ ಒಂದೂ ರೂಪಾಯಿಯನ್ನು ಲಂಚವಾಗಿ ಕೊಡಬೇಡಿ. ಕೇಳಿದವರ ಬಗ್ಗೆ ನಮಗೆ ಮಾಹಿತಿ ಕೊಡಿ ಎಂದು ನೌಕರರಿಗೆ ತಿಳಿಸಿದ್ದಾರೆ. ಅಲ್ಲದೆ ಬಿಎಂಟಿಸಿಯ ಎಲ್ಲ ಘಟಕಗಳಲ್ಲೂ ಎಂಡಿಯವರಿಗೆ ಮಾಹಿತಿ ಕೊಡುವ ಗುಪ್ತಚರರು ಇದ್ದಾರೆ.

ಘಟಕಗಳಲ್ಲಿ ನಿತ್ಯ ನಡೆಯುವ ಎಲ್ಲ ವ್ಯವಹಾರಗಳ ಬಗ್ಗೆ ಎಂಡಿಯವರಿಗೆ ನಿತ್ಯವೂ ಮಾಹಿತಿ ರವಾನೆಯಾಗುತ್ತಿರುತ್ತದೆ. ಅಲ್ಲದೆ ಈವರೆಗೂ ಎಂಡಿ ಅವರು ನೇಮಿಸಿರುವ ಆ ಗುಪ್ತಚರರು ಯಾರು ಎಂಬುವುದು ಮಾತ್ರ ನಿಗೂಢವಾಗಿಯೇ ಇದೆ. ಅಷ್ಟು ಪ್ರಾಮಾಣಿಕ ನೌಕರರು ಈ ಗುಪ್ತಚರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿಯೂ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಇದೇ ರೀತಿ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಇಂಥ ವ್ಯವಸ್ಥೆ ಜಾರಿಯಾದರೆ ಲಂಚಬಾಕ ಅಧಿಕಾರಿಗಳ ಹೆಡೆಮುರಿ ಕಟ್ಟುವ ಮೂಲಕ ಎಲ್ಲರೂ ತಮ್ಮ ತಮ್ಮ ಕೆಲಸವನ್ನು ನಿಷ್ಠೆಯಿದ ಮಾಡಿಕೊಂಡು ಹೋಗಬಹುದಲ್ಲವೇ? ಈ ಬಗ್ಗೆ ಉಳಿದ ಮೂರು ನಿಗಮಗಳ ಎಂಡಿಗಳು ಯೋಚನೆ ಮಾಡಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು