BMTC: ಸ್ಕೂಟರ್‌ಗೆ ಸೈಡ್ ಬಿಡಲಿಲ್ಲ ಎಂದು ಬಸ್ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ಸಿಬ್ಬಂದಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಬೆಂಗಳೂರಿನಲ್ಲಿ ಮತ್ತೆ ಮುಂದುವರಿದಿವೆ. ಸ್ಕೂಟರ್‌ಗೆ ಸೈಡ್ ಬಿಡಲಿಲ್ಲ ಎಂಬ ಕಾರಣಕ್ಕೆ ಬಿಎಂಟಿಸಿ ಬಸ್ ಚಾಲಕ ಕುಶಾಲ್ ಕುಮಾರ್ (38) ಎಂಬವರ ಮೇಲೆ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಲ್ಲೆ ನಡೆದಿರುವ ಘಟನೆ ಜರುಗಿದೆ.
ಮೆಜೆಸ್ಟಿಕ್ನಿಂದ ಸಿ.ಕೆ.ಪಾಳ್ಯ ಕಡೆ ಹೊರಟಿದ್ದ ಬಿಎಂಟಿಸಿ ಬಸ್, ರೂಟ್ ನಂ. 365K/1, ಬಸ್ ನಂಬರ್ KA-57 F-0835 (ಡಿಪೋ-34 ಜಂಬೂಸವಾರಿ ದಿಣ್ಣೆಗೆ ಸೇರಿದ ಬಿಎಂಟಿಸಿ ಬಸ್) ಚಾಲಕನ ಮೇಲೆ ಹಲ್ಲೆ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಕೆ.ಆರ್. ಸರ್ಕಲ್‌ನಿಂದ ನೃಪತುಂಗ ರಸ್ತೆಯಲ್ಲಿ ಬರುತ್ತಿದ್ದ ಸವಾರ, ಸ್ಕೂಟರ್ ಮುಂದೆ ಹೋಗಲು ಸೈಡ್ ಬಿಡಲಿಲ್ಲ ಎನ್ನುವ ಕಾರಣಕ್ಕೆ ಏಕಾಏಕಿ, ಚಾಲಕನ ಸೀಟ್ ಬಳಿಯ ಡೋರ್ನಿಂದ ಬಸ್ ಹತ್ತಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಚಾಲಕ ಕುಶಾಲ್ ಕುಮಾರ್ ಕೊರಳಪಟ್ಟಿಗೆ ಕೈಹಾಕಿ ಎಳೆದಿದ್ದಾನೆ. ಅಲ್ಲದೆ ಪ್ರಶ್ನಿಸಿದ ನಿರ್ವಾಹಕ ಕೃಷ್ಣ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ.
ಈ ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.
ಎಫ್ಐಆರ್ನಲ್ಲೇನಿದೆ? ದೂರುದಾರರಾದ ಕುಶಾಲ್ ಕುಮಾರ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಅವರು ಬಿಎಂಟಿಸಿ ಬಸ್ ಚಾಲಕರಾಗಿದ್ದು, ನವೆಂಬರ್ 20ರಂದು ಸಂಜೆ 05:40 ಗಂಟೆಗೆ ಕೆಬಿಎಸ್, (ಮಜೆಸ್ಟಿಕ್) ಬಸ್ ನಿಲ್ದಾಣದಿಂದ ಬಿಎಂಟಿಸಿ ಬಸ್ ನಂ.ಕೆಎ-57 ಎಫ್-835 ಅನ್ನು ಸಿ,ಕೆ.ಪಾಳ್ಯ ಕಡೆಗೆ ಚಾಲನೆ ಮಾಡಿಕೊಂಡು ಕೆ.ಆರ್.ಸರ್ಕಲ್‌ನಿಂದ ನೃಪತುಂಗ ರಸ್ತೆಯಲ್ಲಿ ಹೋಗುತ್ತಿರುವಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಏಕಾವಿಕಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.
ಆಗ ಆವರು ಏನಾಯಿತು ಎಂದು ಕೇಳಿದಾಗ ಬಾಗಿಲ ಮುಖಾಂತರ ಬಸ್ ಹತ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಸಮವಸ್ತ್ರವನ್ನು ಸಾರ್ವಜನಿಕರ ಮುಂದೆ ಹಿಡಿದು ಎಳೆದಾಡಿ ಎಡ ಕಿವಿ ಮತ್ತು ಭುಜದ ಮೇಲೆ ಕೈಗಳಿಂದ ಹೊಡೆದು ಬಸ್ ಅನ್ನು ಚಾಲನೆ ಮಾಡದಂತೆ ತಡದು ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ.
ಅಲ್ಲದೆ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಬಸ್ ನಲ್ಲಿದ್ದ ನಿರ್ವಾಹಕ ಕೃಷ್ಣ ಅವರು ಪ್ರಶ್ನಿಸಿದಾಗ ಅವರಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಸ್ಥಳದಲ್ಲಿದ್ದ ಕಾರಿನ ಚಾಲಕನೂ ಸಹ ಇದಕ್ಕೆ ಕುಮ್ಮಕ್ಕು ನೀಡಿದ್ದಾನೆ. ಜತೆಗೆ ಪ್ರಾಣ ಬೆದರಿಕೆ ಹಾಕಿ, ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಕೃತ್ಯ ಎಸಗಿದವಮ ಹೆಸರು ಮೊಹಮ್ಮದ್ ಫಜಲ್ ಎಂದು ತಿಳಿದಿದ್ದು, ಅದ್ದರಿಂದ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೂರು ತಿಂಗಳಲ್ಲಿ 9ನೇ ಪ್ರಕರಣವಿದು: ಕಳೆದ ಮೂರು ತಿಂಗಳಿನಿಂದೀಚೆಗೆ ಬಿಎಂಟಿಸಿ ಸಿಬ್ಬಂದಿ ಮೇಲೆ ನಡೆದ 9ನೇ ಹಲ್ಲೆ ಪ್ರಕರಣ ಇದಾಗಿದೆ. ನವೆಂಬರ್ ತಿಂಗಳಲ್ಲೇ ಇದು ನಾಲ್ಕನೇ ಪ್ರಕರಣವಾಗಿದೆ. ಈ ರೀತಿ ಕಿಡಿಗೇಡಿಗಳು ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುತ್ತಾ ಜೀವ ಬೆದರಿಕೆ ಹಾಕುತ್ತಿದ್ದರೆ ಅವರು ಡ್ಯೂಟಿ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ.
ಅಲ್ಲದೆ ಇಂಥ ಕಿಡಿಗೇಡಿಗಳಿಗೆ ಸಾರಿಗೆ ಸಚಿವರು ಮತ್ತು ಸಾರಿಗೆ ಆಡಳಿತ ಮಂಡಳಿ ತಕ್ಕ ಶಿಕ್ಷೆ ವಿಧಿಸುವುದಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಇಂಥವರಿಂದ ಚಾಲನಾ ಸಿಬ್ಬಂದಿಗಳ ಜೀವಕ್ಕೆ ತೊಂದರೆ ಆಗುತ್ತದೆ. ಹೀಗಾಗಿ ಇಂಥ ಘಟನೆಗಳನ್ನು ಲಘುವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.