BMTC: ಅತೀ ಶೀಘ್ರದಲ್ಲೇ ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ- ಎಂಡಿ ರಾಮಚಂದ್ರನ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ಈಗಾಗಲೇ ಅಂದರೆ ಇದೇ ಜ.6ರಿಂದ ಉಚಿತ ವೈದ್ಯಕೀಯ ಸೌಲಭ್ಯ ಸಿಗುತ್ತಿದೆ. ಇದು ಖುಷಿಯ ವಿಷಯ. ಅದೇ ರೀತಿ ರಸ್ತೆ ಸಾರಿಗೆಯ ಮತ್ತೊಂದು ಸಂಸ್ಥೆಯಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕಾರಿಗಳು/ನೌಕರರಿಗೂ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಿಗಮದ ಎಂಡಿ ರಾಮಚಂದ್ರನ್ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಎಂಟಿಸಿಯ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚನೆ ನೀಡಿದ್ದು, ಯಶವಂತಪುರ ಟಿಟಿಎಂಸಿಯಲ್ಲಿರುವ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಕೋರಿದ್ದಾರೆ.
ಈ ಸಂಬಂಧ ಜ.22ರಂದು ಅಂದರೆ ಬುಧವಾರ ಈ ವಿಷಯಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿ/ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ವಿಸ್ತರಿಸಲು ಈ ಅಂಶಗಳನ್ನು ಒಳಗೊಂಡಂತೆ ತಂತ್ರಾಂಶ ಅಭಿವೃದ್ಧಿ ಪಡಿಸಲು ಸಂಸ್ಥೆಯ ಆಡಳಿ ಶಾಖೆ ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
1) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ನೌಕರರ (Basic Details) ಹಾಗೂ ಅವರ ಅವಲಂಬಿತರ (ನಾಮ ನಿರ್ದೇಶಿತರ) ಮಾಹಿತಿಯನ್ನು ದಾಖಲಿಸುವುದು. (Form-1A)
2) ಸಂಸ್ಥೆಯು ಅಧಿಕಾರಿ/ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು ಒಡಂಬಡಿಕೆ ಮಾಡಿಕೊಂಡಿರುವ ಸಂಬಂಧಪಟ್ಟ ಆಸ್ಪತ್ರೆಗಳೊಂದಿಗೆ ಮಾಹಿತಿಯನ್ನು API ಮೂಲಕ ಹಂಚಿಕೆ ಮಾಡುವುದು.
3) ಮೇಲಿನ ಎರಡು ಅಂಶಗಳಿಗೆ ಸಂಬಂಧಪಟ್ಟಂತೆ ಅನ್ವಯವಾಗುವ ವರದಿಗಳನ್ನು ನೀಡುವುದು. ಈ ಅಂಶಗಳನ್ನು ಒಳಗೊಂಡಂತೆ ನಗದು ರಹಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ನೀಡಲು ಈ ಮೂಲಕ ಯಶವಂತಪುರ ಟಿಟಿಎಂಸಿಯಲ್ಲಿರುವ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಕೋರಿರುವುದಾಗಿ ತಿಳಿಸಿದ್ದಾರೆ.
ಹೀಗಾಗಿ ಸಂಸ್ಥೆಯ ಅಧಿಕಾರಿಗಳು ಮತ್ತು ನೌಕರರು ಹಾಗೂ ಅವಲಂಬಿತರ ಎಲ್ಲ ಮಾಹಿತಿಯನ್ನು ಎಷ್ಟು ಶೀಘ್ರವಾಗಿ ದಾಖಲಿಸಲಾಗುತ್ತದೋ ಅಷ್ಟೇ ಶೀಘ್ರದಲ್ಲಿ ಯೋಜನೆ ಜಾರಿಯಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.