ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ನಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದು ಮೂವರು ಗಾಯಗೊಂಡಿರುವ ಘಟನೆ ಭಾರತೀಯ ಸಿಟಿ ಜಂಕ್ಷನ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಭಾರತೀಯ ಸಿಟಿ ಕ್ರಾಸ್ ಬಳಿ ನಿನ್ನೆ ಸಂಜೆ 7.30ರ ಸುಮಾರಿಗೆ ಅವಘಡ ನಡೆದಿದ್ದು ಅಯೂಬ್(35) ಎಂಬುವರು ಮೃತಪಟ್ಟಿದ್ದಾರೆ. ಇನ್ನು ಗಾಯಗೊಂಡ ರಫೀವುಲ್ಲಾ ಖಾನ್, ಮುಸಾದ್ದೀಕ್, ಮುನ್ನಾವರ್ ಎಂಬುವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಾಗವಾರ ಹಾಗೂ ಯಲಹಂಕ ಮಾರ್ಗವಾಗಿ ಬಸ್ ಸಂಚರಿಸುತ್ತಿತ್ತು. ಭಾರತೀಯ ಸಿಟಿ ಜಂಕ್ಷನ್ ಬಳಿ ಟ್ರಾಫಿಕ್ ವಾರ್ಡನ್ ಸೂಚನೆ ಮೇರೆಗೆ ಬೈಕ್‌ಗಳು ನಿಂತಿದ್ದವು. ಈ ವೇಳೆ ಹಿಂದೆಯಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಆ ರಭಸದಲ್ಲಿ ಬೈಕ್‌ಗಳನ್ನು ತಳ್ಳಿಕೊಂಡು ಹೋಗಿದೆ. ಈ ಸರಣಿ ಅಪಘಾತದಲ್ಲಿ 2 ಕಾರ್, 3 ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಬಸ್ ವೇಗದಲ್ಲಿದ್ದ ಕಾರಣ ಕಂಟ್ರೋಲ್ ಸಿಗದೇ ಡಿಕ್ಕಿ ಹೊಡೆದು ಬೈಕ್‍ಗಳನ್ನು ಎಳೆದುಕೊಂಡು ಹೋಗಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಯೂಬ್ ಖಾನ್ ಮೃತಪಟ್ಟಿದ್ದಾರೆ.
ಈ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಹಾಗೂ ಬಸ್‌ಅನ್ನು ವಶಕ್ಕೆ ಪಡೆದು ಸಂಚಾರಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದ್ದಾಗಿ ಬಿಎಂಟಿಸಿ ಬಸ್ ಚಾಲಕ ಗೋವಿಂದರಾಜು ಹೇಳಿಕೆ ನೀಡಿದ್ದಾರೆ.