BMTC- ಅನ್ಯ ಭಾಷೆ ಆಧಾರ್‌ಕಾರ್ಡ್ ವಿಳಾಸ ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಿ: ಸಿಟಿಎಂ ಆದೇಶ
ಬೆಂಗಳೂರು: ಶಕ್ತಿ ಯೋಜನೆಯಡಿ ಅನ್ಯ ಭಾಷೆಯ ಆಧಾರ್ಕಾರ್ಡ್ನ ವಿಳಾಸವು ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಬೇಕು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರಿಗೆ ಮುಖ್ಯ ಸಂಚಾರಿ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ನಾಗರಿಕರು ಆಧಾರ್ ಕಾರ್ಡ್‌ನ್ನು ದೇಶಾದ್ಯಂತ ಯಾವುದೇ ರಾಜ್ಯದಲ್ಲಿ ಪಡೆಯಲು ಅವಕಾಶವಿದ್ದು, ಯಾವ ರಾಜ್ಯದಲ್ಲಿ ಆಧಾರ್ ಕಾರ್ಡ್ ಅನ್ನು ಪಡೆಯುತ್ತಾರೋ ಆ ರಾಜ್ಯದ ಅಧಿಕೃತ ಭಾಷೆ ಮತ್ತು ಅಂಗ್ಲ ಭಾಷೆ (ದ್ವಿಭಾಷೆ/Bilingual )ಯಲ್ಲಿ ಆಧಾರ್ ಕಾರ್ಡ್ ಮುದ್ರಣವಾಗುತ್ತದೆ.
ಆದ್ದರಿಂದ ಕನ್ನಡ ಹೊರತುಪಡಿಸಿ ಅನ್ಯ ಭಾಷೆಯ ಮುದ್ರಿತ (ದ್ವಿಭಾಷೆ/Bilingual) ಆಧಾರ್ ಕಾರ್ಡ್‌ಗಳಲ್ಲಿನ ಆಂಗ್ಲ ಭಾಷೆಯಲ್ಲಿರುವ ವಿಳಾಸವನ್ನು ಪರಿಶೀಲಿಸಿ ವಿಳಾಸವು ಕರ್ನಾಟಕ ರಾಜ್ಯದಾಗಿದ್ದಲ್ಲಿ ಆ ಆಧಾರ್‌ಕಾರ್ಡ್ ಅನ್ನು ಮಾನ್ಯ ಮಾಡಿ, ಶಕ್ತಿ ಯೋಜನೆಯಡಿಯಲ್ಲಿ ಉಚಿತ ಚೀಟಿ ವಿತರಣೆ ಮಾಡಲು ತಿಳಿಸಲಾಗಿದೆ.
ಆದಾಗ್ಯೂ, ಚಾಲನಾ ಸಿಬ್ಬಂದಿಗಳು ಅನ್ಯ ಭಾಷೆಯ ಆಧಾರ್ಕಾರ್ಡ್ನ ವಿಳಾಸವು ಕರ್ನಾಟಕದಾಗಿದ್ದರೂ ಮಾನ್ಯ ಮಾಡದೇ ಇರುವ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗುತ್ತಿದೆ. ಆದ್ದರಿಂದ ಈ ಸುತ್ತೋಲೆಯಲ್ಲಿನ ವಿಷಯದ ಬಗ್ಗೆ ಎಲ್ಲ ಚಾಲನಾ ಸಿಬ್ಬಂದಿಗಳಿಗೆ ತಿಳಿವಳಿಕೆ ನೀಡಿ, ಇಂತಹ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಬೇಕು ಎಂದು ಸಂಬಂಧಪಟ್ಟ ಡಿಸಿ, ಡಿಎಂಗಳಿಗೆ ತಿಳಿಸಲಾಗಿದೆ.
ಅಲ್ಲದೆ ಎಲ್ಲ ಘಟಕಗಳ ಸೂಚನಾ ಫಲಕಗಳಲ್ಲಿ ಸುತ್ತೋಲೆಯ ಪ್ರತಿಯನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಿಗಮದ ಮುಖ್ಯ ಸಂಚಾರಿ ವ್ಯವಸ್ಥಾಪಕರು ತಿಳಿಸಿದ್ದಾರೆ.