BMTC: ಇಂದು ಬೆಳಗ್ಗೆ 6ರಿಂದ ರಾತ್ರಿ 10ಗಂಟೆ ವರೆಗೂ ಟಿಕೆಟ್ ಚೆಕಿಂಗ್‌ಗೆ 120 ಸಿಬ್ಬಂದಿಗಳ ನಿಯೋಜನೆ
![](https://vijayapatha.in/wp-content/uploads/2023/10/3-Oct-bmtc-e1697623335541.jpg)
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆದಾಯ ಕುಂಠಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಾರ್ಗ ತನಿಖಾಧಿಕಾರಿಗಳನ್ನು ಇಂದು ಎರಡೂ ಪಾಳಿಗಳಲ್ಲಿ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ನಿಯೋಜಿಸಿದ್ದಾರೆ.
ಇಂದು (ಜುಲೈ 9ರಂದು) ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆ ವರೆಗೆ ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆ ವರೆಗೆ ವಿಶೇಷ ಮಾರ್ಗ ತನಿಖಾ ಕಾರ್ಯಕ್ಕಾಗಿ ತಲಾ 60 ಸಂಚಾರ ಸಿಬ್ಬಂದಿಗಳ ನಿಯೋಜನೆ ಮಾಡಿ ಕಾರ್ಯಚರಣೆಗೆ ಇಳಿಸಲಾಗಿದೆ.
ಸಂಸ್ಥೆಯ ಆದಾಯ ಕುಂಠಿತಗೊಂಡಿದ್ದು, ಸಂಸ್ಥೆಯ ವಾಹನಗಳಲ್ಲಿ ಸಾರಿಗೆ ಆದಾಯ ಸೋರಿಕೆ ತಡೆಗಟ್ಟಿ ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸುವಂತೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ಸಾರಿಗೆ ಆದಾಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜುಲೈ 9ರಂದು ಮಂಗಳವಾರ, ಮೊದಲನೇ ಪಾಳಿ (06.00 ರಿಂದ 14.00) ಹಾಗೂ ಎರಡನೇ ಪಾಳಿ (14.00 ರಿಂದ 22.00ರವರೆಗೆ) ವಿಶೇಷ ಮಾರ್ಗ ತನಿಖೆ ನಡೆಯಲಿದೆ.
ಇನ್ನು ಮಾರ್ಗ ಪತ್ರಗಳ ತಿದ್ದುಪಡಿ, ಕಡಿಮೆ/ ಹೆಚ್ಚುವರಿ ದರದ ಚೀಟಿಗಳನ್ನು ವಿತರಿಸುವುದು, ಅನಧಿಕೃತ ಚೀಟಿಗಳನ್ನು ಹೊಂದಿರುವುದು, ಚೀಟಿಗಳನ್ನು ಮರುವಿತರಣೆ, ಪಾಸುಗಳ ಮರು ಮಾರಾಟ, ಶಕ್ತಿ ಯೋಜನೆ ಉಚಿತ ಚೀಟಿಗಳ ದುರುಪಯೋಗ ಪ್ರಕರಣಗಳ ನಿಗಾವಹಿಸಲು ಈ ವಿಶೇಷ ಮಾರ್ಗ ತನಿಖಾ ಕಾರ್ಯವನ್ನು ಘಟಕ/ ಬಸ್ ನಿಲ್ದಾಣ/ ವಲಯ/ ಕೇಂದ್ರ ಕಚೇರಿ ಮತ್ತು ಸಾರಥಿ/ ಭದ್ರತಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಹೀಗಾಗಿ ಅಧಿಕಾರಿಗಳ ಕಚೇರಿ ವಾಹನ, ಸಾರಥಿ/ ಘಟಕ ವಾಹನಗಳನ್ನು ಉಪಯೋಗಿಸಿ, ಹೆಚ್ಚು ತಂಡಗಳನ್ನು ನಿಯೋಜಿಸಿ ಎಲ್ಲ ವರ್ಗದ ಸಾರಿಗೆಗಳಲ್ಲಿ ತನಿಖೆಗೆ ಒಳಪಡಿಸಲು ಪರಿಣಾಮಕಾರಿ ಮಾರ್ಗ ತನಿಖಾ ಕಾರ್ಯ ಕೈಗೊಳ್ಳಲು ವಿಶೇಷ ತನಿಖೆ ಮಾಡಲಾಗುತ್ತಿದೆ.
ಇಂದು ಈ ವಿಶೇಷ ತನಿಖಾ ಕಾರ್ಯದ ಅವಧಿಯಲ್ಲಿ ಯಾವುದೇ ಅನುಸೂಚಿ ವಾಹನ ರದ್ದಾಗದೇ ನಿಗದಿತ ಸಮಯಕ್ಕೆ ಸರಿಯಾಗಿ ಮಾರ್ಗದ ಮೇಲೆ ಕಾರ್ಯಾಚರಣೆ ಮಾಡಲು ಎಲ್ಲ ಘಟಕ ವ್ಯವಸ್ಥಾಪಕರು/ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.
ಈ ವಿಶೇಷ ತನಿಖಾ ಕಾರ್ಯಕ್ಕಾಗಿ ನಿಯೋಜಿಸಿರುವ ಸಿಬ್ಬಂದಿಗಳ ವಿವರದ ಪಟ್ಟಿಯನ್ನು ಸಹ ನೀಡಲಾಗಿದ್ದು, ಬಹುತೇಕ ಸಂಸ್ಥೆಯ ಎಲ್ಲ ಘಟಕ ವ್ಯವಸ್ಥಾಪಕರು, ATS, TI, TC ಹೀಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ತಪ್ಪದೇ ವಿಶೇಷ ತನಿಖಾ ಕಾರ್ಯಕ್ಕೆ ನಿಗದಿಪಡಿಲಾಗಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)