ಮೈಸೂರು: ಮೆಕ್ಯಾನಿಕಲ್ ಇಂಜಿನಿಯರ್ ಯುವಕನ ಮೆದುಳು ನಿಷ್ಕ್ರಿಯಗೊಂಡ ವಿಷಯ ತಿಳಿದು ದುಃಖಿತರಾದ ಪಾಲಕರು ಆ ಮಗ ಜೀವವನ್ನು ಕಳೆದುಕೊಳ್ಳುತ್ತಿರುವುದರ ನಡುವೆಯೂ ನಾಲ್ವರಿಗೆ ಜೀವದಾನ ಮಾಡುವ ಮೂಲಕ ಮಾದರಿಯಾಗಿ ನಿಂತಿದ್ದಾರೆ.
ಮೈಸೂರಿನ ಹೆಬ್ಬಾಳ ನಿವಾಸಿ, ಮೆಕ್ಯಾನಿಕಲ್ ಇಂಜಿನಿಯರ್ ಜೆ.ಮನೋಜ್ (26) ಅವರ ಪಾಲಕರೆ ಈ ಯುವಕನ ಅಂಗಾಂಗ ದಾನ ಮಾಡುವ ಮೂಲಕ ನಾಲ್ವರ ಜೀವದಾನ ಮಾಡಿದರು.
ಘಟನೆ : ಮೆಕ್ಯಾನಿಕಲ್ ಇಂಜಿನಿಯರ್ ಜೆ.ಮನೋಜ್ ಅ.16ರಂದು ಮೈಸೂರಿನ ಜೆ.ಸಿ.ನಗರದ ಬಳಿ ಅಪಘಾತಕ್ಕೀಡಾಗಿದ್ದರು. ಅ.17ರಂದು ಅವರನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದರಿಂದ ಎರಡು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿರಿಸಲಾಗಿತ್ತು.
ಈ ವೇಳೆ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿಕೊಂಡ ವೈದ್ಯರು ಅ.20ರ ಬೆಳಗ್ಗೆ ಮಾನವ ಅಂಗಾಂಗ ಕಸಿ ಕಾಯ್ದೆಯ ಪ್ರಕಾರ, ಆಸ್ಪತ್ರೆಯ ವೈದ್ಯರು ಬ್ರೆನ್ ಡೆಡ್ ಎಂದು ಘೋಷಿಸಿದ್ದರು. ನಂತರ ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತಪಡಿಸಲಾಗಿತ್ತು.
ಬಳಿಕ ಮನೋಜ್ ಪಾಲಕರಾದ ಜಯಶಂಕರ್ ಮತ್ತು ಜಯಲಕ್ಷ್ಮಿ ಅವರಿಗೆ ಅಂಗಾಂಗ ದಾನದ ಬಗ್ಗೆ ಸಲಹೆ ನೀಡಿದಾಗ, ಪೋಷಕರು ಒಪ್ಪಿಗೆ ಸೂಚಿಸಿದ್ದರು. ಮನೋಜ್ ಅಂಗಗಳನ್ನು (ಹೃದಯ ಕವಾಟಗಳು, ಒಂದು ಮೂತ್ರಪಿಂಡ, ಯಕೃತ್ತು ಕಾರ್ನಿಯಾಗಳನ್ನು ಕಸಿ ಮಾಡಲಾಗಿದೆ.
ಹೃದಯ ಕವಾಟಗಳನ್ನು ಬೆಂಗಳೂರಿನ ಜಯದೇವ ಆಸ್ಪತ್ರೆ, ಲಿವರ್ ಹಾಗೂ ಬಲ ಕಿಡ್ನಿಯನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ, ಕಾರ್ನಿಯಾಗಳನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ರವಾನೆ ಮಾಡಲಾಯಿತು.