ಪಟಿಯಾಲ: ಕರ್ನಾಟಕದ ರೈತ ಮುಖಂಡ, ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ನಾಯಕ ಕುರುಬೂರು ಶಾಂತಕುಮಾರ್ ಸಂಚರಿಸುತ್ತಿದ್ದ ಕಾರು ಅಪಘಾಕ್ಕೀಡಾಗಿದ್ದು ಸಣ್ಣಪುಟ್ಟಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಂಜಾಬ್‌ನಲ್ಲಿ ಆಯೋಜಿಸಿದ್ದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹಲವು ಕಾರುಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಕುರುಬೂರು ಶಾಂತಕುಮಾರ್ ಗಾಯಗೊಂಡಿದ್ದಾರೆ. ತಕ್ಷಣವೇ ಕುರುಬೂರು ಶಾಂತಕುಮಾರ್ ಅವರನ್ನು ಪಂಜಾಬ್‌ನ ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಕುರುಬೂರು ಶಾಂತಕುಮಾರ್ ಅವರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(MSP) ಜಾರಿ ಮಾಡಬೇಕು ಎಂಬ ಸಂಬಂಧ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ಪಂಜಾಬ್‌ಗೆ ತೆರಳಿದ್ದರು. ದೆಹಲಿಯಿಂದ ಪಂಜಾಬ್ ಕಡೆ ಪ್ರಯಾಣಿಸುವಾಗ ಈ ಘಟನೆ ನಡೆದಿದೆ.
ಅಪಘಾತದಿಂದಾಗಿ ಶಾಂತಕಮಾರ್ ಅವರ ಎಡಗೈ, ಎಡ ಕಾಲಿಗೆ ಗಾಯವಾಗಿದೆ. ಜತೆಗೆ ಸ್ಪೈನಲ್ ಕಾರ್ಡ್‌ಗೂ ಪೆಟ್ಟಾಗಿದೆ. ರಾಜ್ಯದಿಂದ ದೆಹಲಿಗೆ ತೆರಳಿದ್ದ ಶಾಂತಕುಮಾರ್, ಅಲ್ಲಿಂದ ಪಂಜಾಬ್ ಕಡೆ ಎಸ್ಕಾರ್ಟ್ ವಾಹನ ಜತೆ ತೆರಳುತ್ತಿದ್ದ ವೇಳೆ ಮುಂದಿನ ವಾಹನ ಅಪಘಾತಕ್ಕೀಡಾಗಿದೆ.
ಹೀಗಾಗಿ ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಪರಿಣಾಣ ಹಿಂದಿನಿಂದ ಬರುತ್ತಿದ್ದ 25ಕ್ಕೂ ಹೆಚ್ಚು ಕಾರುಗಳ ಪೈಕಿ 5ಕ್ಕೂ ಹೆಚ್ಚು ಕಾರುಗಳು ಏಕಕಾಲಕ್ಕೆ ಸರಣಿ ಅಪಘಾತಕ್ಕೀಡಾಗಿವೆ.
ಈ ಅಪಘಾತದ ಬೆನ್ನಲ್ಲೇ ತಮಿಳುನಾಡಿನ ರೈತ ಸಂಘದ ಅಧ್ಯಕ್ಷ ಟಿ.ಆರ್. ಪಾಂಡಿಯನ್ ಸೇರಿದಂತೆ ಇತರ ರೈತ ನಾಯಕರು, ಸಿಬ್ಬಂದಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ರಾಜೇಂದ್ರ ಆಸ್ಪತ್ರೆಯಲ್ಲಿ ಕುರುಬೂರು ಶಾಂತಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.