ಬೆಂಗಳೂರು: ಬೆಂಗಳೂರಿನ ಪ್ರತಿ ವಾರ್ಡಿಗೆ ಒಂದರಂತೆ ಕನಿಷ್ಠ 250 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಸೇವೆ ಮತ್ತು ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಸಿಎಂ ಸೋಮವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇಲ್ಲಿವರೆಗೂ ಇಂದಿರಾ ಕ್ಯಾಂಟಿನ್‌ಗೆ ಬಿಬಿಎಂಪಿ ವತಿಯಿಂದ 70% ಹಾಗೂ ಸರ್ಕಾರದಿಂದ ಶೇ.30 ರಷ್ಟು ವೆಚ್ಚ ಭರಿಸಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿಯು ಶೇ. 50 ರಷ್ಟು ಹಾಗೂ ಸರ್ಕಾರ ಶೇ. 50 ರಷ್ಟು ವೆಚ್ಚ ಭರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಇನ್ನು ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧೆಡೆಗಳಲ್ಲಿ ಇಂದಿರಾ ಕ್ಯಾಂಟೀನ್ ವೆಚ್ಚದಲ್ಲಿ ಸರ್ಕಾರ ಶೇ.70 ರಷ್ಟು ಹಾಗೂ ಸ್ಥಳೀಯ ನಗರ ಸಭೆಗಳು ಶೇ. 30 ರಷ್ಟು ಭರಿಸಬೇಕೆಂದು ತೀರ್ಮಾನಿಸಲಾಗಿದೆ. ರಾಜ್ಯದ ಯಾವೆಲ್ಲ ಸ್ಥಳಗಳಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆನ್ನುವ ಸ್ಥಳಗಳ ಪಟ್ಟಿಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್‌ನಲ್ಲಿ ದೊರೆಯುವ ಆಹಾರದ ಕ್ರಮವನ್ನು ಬದಲಾಯಿಸುತ್ತಿದ್ದು, ಆಹಾರದ ಗುಣಮಟ್ಟ, ಪ್ರಮಾಣ ಹಾಗೂ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ. ಆದರೆ ದರ ಪರಿಷ್ಕರಣೆ ಇಲ್ಲ. ವಲಯವಾರು ಕರೆಯಲಾಗುವ ಟೆಂಡರ್ ಪ್ರಕ್ರಿಯೆ ನಂತರ ಇಂದಿರಾ ಕ್ಯಾಂಟೀನ್ ಯೋಜನೆಗೆ ಪುನಾ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಕ್ಯಾಂಟೀನ್‌ಗಳು ಸುಸ್ಥಿತಿಯಲ್ಲಿರಬೇಕು, ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಮತ್ತು ಉತ್ತರ ಕರ್ನಾಟಕದಲ್ಲಿ ಸ್ಥಳೀಯ ಆಹಾರವನ್ನು ಒದಗಿಸಲು ಸೂಚನೆಗಳೊಂದಿಗೆ ನಿಗದಿತ ಮೆನುವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಾದ ಕಾಲೇಜುಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ತಾಲೂಕು ಕಚೇರಿಗಳು ಇತ್ಯಾದಿಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚನೆಗಳನ್ನು ನೀಡಲಾಯಿತು.
ಬೆಂಗಳೂರಿನಲ್ಲಿ 175 ಕ್ಯಾಂಟೀನ್‌ಗಳಿದ್ದು, 163 ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕ್ಯಾಂಟೀನ್‌ಗಳು ಉಪಾಹಾರವನ್ನು 5 ರೂ.ಗೆ ನೀಡುತ್ತವೆ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತಲಾ 10 ರೂ.ಗೆ ಲಭ್ಯವಾಗಲಿದೆ.
ಸಿದ್ದರಾಮಯ್ಯನವರ ದೊಡ್ಡ ಜನಪರ ಯೋಜನೆಯಾಗಿ ಆರಂಭವಾದ ಇಂದಿರಾ ಕ್ಯಾಂಟೀನ್‌ಗಳನ್ನು ಮೊದಲು 2013-18ರ ನಡುವೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಚಯಿಸಲಾಗಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈಗಿರುವ ಕ್ಯಾಂಟೀನ್‌ಗಳಿಗೆ ಕಾಯಕಲ್ಪ ನೀಡಿ ರಾಜ್ಯಾದ್ಯಂತ ವಿಸ್ತರಿಸುವುದಾಗಿ ಭರವಸೆ ನೀಡಿತ್ತು.