ತುಮಕೂರು: ವಿಜಯಪಥ ವರದಿಯಿಂದ ಎಚ್ಚೆತ್ತ ಸಾರಿಗೆ ಅಧಿಕಾರಿಗಳು ಕೊನೆಗೂ ಭ್ರಷ್ಟ, ಲಂಚಬಾಕ ಅಧಿಕಾರಿ ಎಂಬ ಆರೋಪ ಹೊತ್ತಿರುವ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜು ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಿಸಿದ್ದಾರೆ.
ಈ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಕೆ.ಆರ್. ಬಸವರಾಜು ಅವರನ್ನು ಬಿಎಂಟಿಸಿಯಲ್ಲಿ ಖಾಲಿ ಇದ್ದ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆ ಮಾಡಿ ಕೆಎಸ್‌ಆರ್‌ಟಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಮಾಡಿದ್ದಾರೆ.
ಸಕ್ಷಮ ಪ್ರಾಧಿಕಾರಿಗಳ ಆದೇಶದನ್ವಯ ಕೆ.ಆರ್. ಬಸವರಾಜು ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ಕಾರಣಗಳ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಈ ಬಸವರಾಜು ಸಂಸ್ಥೆಯಲ್ಲಿ ಭ್ರಷ್ಟಾಚಾರ ಎಸಗಿದ್ದು, ನೌಕರರಿಂದ ಲಂಚ ಪಡೆದ ಆರೋಪ ಸೇರಿದಂತೆ 40 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇವರ ವಿರುದ್ಧ ಆರೋಪಪಟ್ಟಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಆದರೆ, ಈತನನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸ್ಥಾನದಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರ ಕಣ್ಣು ತಪ್ಪಿಸಿ ಇನ್ನು ಆ ಆರೋಪ ಪಟ್ಟಿಯನ್ನು ಮರೆ ಮಾಚಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಇದನ್ನೂ ಓದಿ: ತುಮಕೂರು: ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಲಂಚಾವತಾರ- ದಿನಕ್ಕೆ 1ಲಕ್ಷ ರೂ. ಸೂಟ್‌ಕೇಸ್ ಇಲ್ಲದೆ ಮನಗೇ ಹೋಗಲ್ಲ
ಈ ಎಲ್ಲದರ ಬಗ್ಗೆ ವಿಜಯಪಥ ಆನ್‌ಲೈನ್ ಸುದ್ದಿ ಮಾಧ್ಯಮ ಬಸವರಾಜು ಅವರ ಬಗ್ಗೆ ಸರಣಿ ವರದಿ ಮಾಡಿತ್ತು. ಅಲ್ಲದೆ ಇವರ ಲಂಚವತಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ವಿಜಯಪಥದಲ್ಲಿ ವರದಿ ಬಂದಿದ್ದನ್ನು ಗಮನಿಸಿದ ಎಂಡಿ ಅನ್ಬುಕುಮಾರ್ ಅವರು ಕೆಲ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದರು. ಅಲ್ಲದೆ ಈತನ ವರ್ಗಾವಣೆ ಮಾಡಿ ಎಂದು ತಾಕೀತು ಮಾಡಿದ್ದರಿಂದ ಸದ್ಯ ಕೆಎಸ್‌ಆರ್‌ಟಿಸಿ ಬಿಟ್ಟು ಬಿಎಂಟಿಸಿಗೆ ವರ್ಗಾವಣೆ ಗೊಂಡಿದ್ದಾರೆ.
ಆದರೆ, ಈ ವರ್ಗಾವಣೆಗೊಂಡ ಕೆಲವೆ ನಿಮಿಷಗಳಲ್ಲಿ ಮತ್ತೆ ತುಮಕೂರಿನಲ್ಲೇ ಉಳಿದುಕೊಳ್ಳುವ ಸಲುವಾಗಿ ಈಗಾಗಲೇ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಚಂದ್ರಪ್ಪ ಸೇರಿದಂತೆ ಕೆಲ ರಾಜಕೀಯ ವ್ಯಕ್ತಿಗಳಿಂದ ಪ್ರಭಾವ ಬೀರಿಸುತ್ತಿದ್ದಾರೆ ಎಂಬ ಬಗ್ಗೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇಂಥ ಭ್ರಷ್ಟ ಅಧಿಕಾರಿಗಳು ಆಯಕಟ್ಟಿನ ಸ್ಥಳಲ್ಲಿ ಇದ್ದರೆ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗಿ ಅಪಘಾತಗಳು ಸಂಭವಿಸುವುದು ಹೆಚ್ಚಾಗಲಿವೆ. ಹೀಗಾಗಿ ಈತನ ಭ್ರಷ್ಟಾಚಾರಕ್ಕೆ ಉತ್ತೇಜ ನೀಡುವಂತ ಕೆಲಸಕ್ಕೆ ಸಂಸ್ಥೆಯ ಅಧ್ಯಕ್ಷರಾಗಲಿ, ಅಥವಾ ಯಾವುದೇ ಜನಪ್ರತಿನಿಧಿಯಾಲಿ ಮುಂದಾಗಬಾರದು ಎಂದು ನೌಕರರು ಮನವಿ ಮಾಡಿದ್ದಾರೆ.
ಇನ್ನು ಕೆ.ಆರ್. ಬಸವರಾಜು ಅವರ ಲಂಚಬಾಕತನಕ್ಕೆ ಸ್ಪಂದಿಸದ ಅದೆಷ್ಟೋ ಪ್ರಾಮಾಣಿಕ ಅಧಿಕಾರಿಗಳು ವಿಭಾಗದಿಂದ ವರ್ಗಾವಣೆಗೊಂಡಿದ್ದಾರೆ. ಇನ್ನು ಕೆಲ ಅಧಿಕಾರಿಗಳು ಒತ್ತಡಕ್ಕೆ ಸಿಲುಕಿ ನಿತ್ಯ ಯಾತನೆ ಅನುಭವಿಸಿದ್ದಾರೆ. ಅಲ್ಲದೆ ನಿಗಮದ ಚಾಲನಾ ಸಿಬ್ಬಂದಿ ಸೇರಿದಂತೆ ಇತರ ನೌಕರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಿಕಿರಿ ಅನುಭವಿಸಿದ್ದಾರೆ.
ಹೀಗಾಗಿ ತುಮಕೂರು ವಿಭಾಗಕ್ಕೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಸದ್ಯ ನಿಯೋಜನೆ ಗೊಂಡಿರುವ ಎ.ಎನ್. ಗಜೇಂದ್ರಕುಮಾರ್ ಅವರು ನೌಕರರಿಗೆ ಕಿರುಕುಳ ಕೊಡುವ ಅಧಿಕಾರಿಗಳನ್ನು ಮಟ್ಟಹಾಕಬೇಕು. ಅಲ್ಲದೆ ಪ್ರಮುಖವಾಗಿ ವಿಭಾಗದಲ್ಲಿ ನಡೆಯುತ್ತಿರುವ ಲಂಚವತಾರಕ್ಕೆ ಕಡಿವಾಣ ಹಾಕುವಂತೆ ನೊಂದ ನೌಕರರು ಮನವಿ ಮಾಡಿದ್ದಾರೆ.
ಇನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಅನ್ಬುಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಭ್ರಷ್ಟರ ಬೇಟೆಯಲ್ಲಿ ನಿರತವಾಗಿ ಪ್ರಾಮಾಣಿಕ ಅಧಿಕಾರಿಗಳಿಗೆ ಸಾಥ್ ನೀಡುತ್ತಿದ್ದಾರೆ. ಅವರ ಈ ಕೆಲಸಕ್ಕೆ ಎಲ್ಲ ನೌಕರರು ಅಭಿನಂದನೆ ತಿಳಿಸಿದ್ದಾರೆ.