ನಾಸಿಕ್: ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮ (MSRTC) ವಿಭಾಗದ ಮುಷ್ಕರ ನಿರತ ನೌಕರರು ಕರ್ತವ್ಯ ಪುನರಾರಂಭಿಸದೆ ದೃಢವಾಗಿರುವುದರಿಂದ ಸರ್ಕಾರ ಅನ್ಯ ಮಾರ್ಗ ನಡೆ ಅನುರಿಸುತ್ತಿದೆ. ಗುತ್ತಿಗೆ ಆಧಾರದ ಮೇಲೆ ಖಾಸಗಿ ಚಾಲಕರನ್ನು ನೇಮಿಸಿಕೊಳ್ಳುತ್ತಿದೆ. ಈ ಮೂಲಕ ಮುಷ್ಕರ ನಿತರ ನೌಕರರಿಗೆ ಸೆಡ್ಡುಹೊಡೆಯಲು ಮುಂದಾಗಿದೆ.
ನಿನ್ನೆ ಎಂಎಸ್‌ಆರ್‌ಟಿಸಿ ನಾಸಿಕ್ ವಿಭಾಗವು ಖಾಸಗಿ ಸಂಸ್ಥೆಯಿಂದ ಗುತ್ತಿಗೆ ಆಧಾರದ ಮೇಲೆ 38 ಚಾಲಕರನ್ನು ನೇಮಿಸಿಕೊಂಡಿದೆ. ಅಲ್ಲದೆ ದಿನಗೂಲಿ ಆಧಾರದ ಮೇಲೆ ನಿವೃತ್ತ ರಾಜ್ಯ ಸಾರಿಗೆ ನೌಕರರನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಈ ಬಗ್ಗೆ ಎಂಎಸ್‌ಆರ್‌ಟಿಸಿಯ ನಾಸಿಕ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದು, ನಾವು 50 ಚಾಲಕರನ್ನು ನೇಮಿಸಿಕೊಂಡಿದ್ದೇವೆ. ರಾಜ್ಯ ಸಾರಿಗೆ ಕೇಂದ್ರ ಕಚೇರಿ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು 50 ಮಂದಿಯಲ್ಲಿ ಈಗಾಗಲೇ 38 ಮಂದಿ ಚಾಲಕರಿಗೆ ಬುಧವಾರದಿಂದ ಅಂತರ ಜಿಲ್ಲಾ ಬಸ್‌ಗಳನ್ನು ಚಾಲನೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಿದರು.
ಈ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಚಾಲಕರಿಗೆ ತಾತ್ಕಾಲಿಕ ಉದ್ಯೋಗ ನೀಡಲಾಗುತ್ತದೆ. ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವವರನ್ನು ನೇಮಿಸಿಕೊಳ್ಳಲಾಗಿದೆ. ಇನ್ನು ನಿವೃತ್ತ ನೌಕರರ ಕುರಿತು ಮಾತನಾಡಿದ ಅಧಿಕಾರಿ, ಬಸ್‌ಗಳನ್ನು ಓಡಿಸುವ ಸಾಮರ್ಥ್ಯವಿರುವ ನಿವೃತ್ತ ಚಾಲಕರನ್ನು ಗುರುತಿಸಲು ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಏತನ್ಮಧ್ಯೆ, ಮುಂಜಾಗ್ರತಾ ಕ್ರಮವಾಗಿ 11 ಎಂಎಸ್‌ಆರ್‌ಟಿಸಿ ನೌಕರರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ರಾಜ್ಯ ಸರ್ಕಾರದೊಂದಿಗೆ ನಿಗಮವನ್ನು ಸಂಪೂರ್ಣವಾಗಿ ವಿಲೀನಗೊಳಿಸುವಂತೆ ಒತ್ತಾಯಿಸಿ MSRTC ನೌಕರರು ನವೆಂಬರ್ 9 ರಿಂದ ಮುಷ್ಕರವನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ರಾಜ್ಯ ಸರಕಾರ ನೌಕರರ ವೇತನ ಹೆಚ್ಚಿಸಿದ್ದು, ಸರಕಾರದೊಂದಿಗೆ ನಿಗಮದ ವಿಲೀನಕ್ಕೆ ರಚಿಸಿರುವ ಸಮಿತಿಯ ಶಿಫಾರಸ್ಸುಗಳನ್ನು ಪಾಲಿಸುವುದಾಗಿ ಭರವಸೆ ನೀಡಿದೆ.
ಆದರೂ ವಿಲೀನವಾಗಲೇ ಬೇಕು ಎಂದು ಪಟ್ಟು ಹಿಡಿದಿರುವ ನೌಕರರು ಕೆಲಸಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿದ್ದಾರೆ.