ಬೆಂಗಳೂರು: ದಸರಾ ಹಬ್ಬಕ್ಕೆ ಪೂರಕವಾಗುವಂತೆ ರಾಜ್ಯಾದ್ಯಂತ ದಸರಾ ರಜೆಯನ್ನು ಪರಿಷ್ಕರಣೆ ಮಾಡಿದ್ದು, ಸೆ.26ರಿಂದ ಅ.10ರವರೆಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಅಲ್ಲದೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ಶಿಕ್ಷಣ ಸಚಿವ ನಾಗೇಶ್ ಸ್ಥಳೀಯ ಮಟ್ಟದ ಮನವಿ ಮೇರೆಗೆ ದಸರಾ ರಜೆಯನ್ನುಆಯಾಯ ಜಿಲ್ಲೆಗಳಿಗೆ ಪೂರಕವಾಗುವಂತೆ ಪರಿಶೀಲಿಸಲಾಗಿದ್ದು, ಪ್ರಕಟಣೆ ಹೊರಡಿಸುವಂತೆ ಸೂಚಿಸಿದ್ದಾರೆ. ಆದರೆ ಅ.2ರ ಗಾಂಧಿ ಜಯಂತಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಲು ಸೂಚಿಸಿದ್ದಾರೆ.
ಶಿಕ್ಷಣ ಸಚಿವರ ಟಿಪ್ಪಣಿಯಲ್ಲಿ ಏನಿದೆ: ಪ್ರತಿ ವರ್ಷದಂತೆ ಈ ವರ್ಷದ ರಾಜ್ಯದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿಪಡಿಸಿ ಶೈಕ್ಷಣಿಕ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ. ಅದರಂತೆ ಈ ಮಾರ್ಗಸೂಚಿಯನ್ವಯ ಶಾಲಾರಂಭ, ಶಾಲಾ ಮುಕ್ತಾಯದ ದಿನ, ದಸರೆ, ಬೇಸಿಗೆ ರಜೆ ಕಿರು ಪರೀಕ್ಷೆ, ಪರೀಕ್ಷೆ ನಡೆಸಬೇಕಾದ ಅವಧಿ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ.
ಕೆಲವು ಸ್ಥಳೀಯ ಸನ್ನಿವೇಶಗಳಿಗೆ ತಕ್ಕಂತೆ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಮಾರ್ಪಾಡು ಅಗತ್ಯವಿದ್ದಲ್ಲಿ, ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬದಲಾವಣೆಗಳನ್ನು ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲೆಯಲ್ಲಿ ದಸರೆ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ಸೆ. 26. ರಿಂದ ಅ.10 ರವರೆಗೆ ದಸರೆ ರಜೆ ನೀಡುವಂತೆ ಕೋರಿಕೆ ಬಂದಿದ್ದು, ಅದರಂತೆ ಪರಿಶೀಲಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಸರಿದೂಗಿಸುವ ಹಾಗೂ ಅ.2 ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸುವ ಷರತ್ತಿನ ಮೇರೆಗೆ ರಜೆಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲು ತಿಳಿಸಿದೆ.