ಪಾಟ್ನಾ: ಬ್ಯಾಂಕ್ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ವಯೋವೃದ್ದರೊಬ್ಬರ ಸ್ಥಿತಿಗೆ ಮರುಗಿದ ನ್ಯಾಯಾಧೀಶರೊಬ್ಬರು ವೃದ್ಧರ ಸಾಲ ತೀರಿಸಿದ ಮಾನವೀಯ ಪ್ರಸಂಗ ಬಿಹಾರದಲ್ಲಿ ನಡೆದಿದೆ.
ಬಿಹಾರದ ಜಿಲ್ಲಾ ನ್ಯಾಯಾಧೀಶ ರಾಕೇಶ್ ಕುಮಾರ್ ಅವರೇ ವೃದ್ಧರ ಸಾಲ ತೀರಿಸಿ ಮಾನವೀಯತೆ ಮೆರೆದವರು. ಬ್ಯಾಂಕ್‌ನಿಂದ ಸಾಲ ಮಾಡಿದ ರಾಜೀಂದ್ರ ಚೌಹಾನ್ ಎಂಬ ವೃದ್ಧರಿಗೆ 18 ಸಾವಿರ ರೂ.ಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ.
ಸಾಲ ಪಾವತಿ ವಿಳಂಬ ವಿಚಾರ ಸಂಬಂಧ ಬ್ಯಾಂಕ್ ಕೋರ್ಟ್‌ನಲ್ಲಿ ಪ್ರಕರಣ ಹೂಡಿತು. ಈ ಪ್ರಕರಣ ಇತ್ಯರ್ಥಕ್ಕಾಗಿ ಲೋಕ ಅದಾಲತ್‌ಗೆ ತೆರಳಿದ್ದರು. ಆದರೆ ಅವರ ಬಳಿ ಕೇವಲ 5 ಸಾವಿರ ರೂ. ಇನ್ನು ಅವರೊಂದಿಗೆ ಬಂದ ವ್ಯಕ್ತಿ ಬಳಿ 3 ಸಾವಿರ ರೂ. ಮಾತ್ರ ಇತ್ತು. ಸಾಲ ತೀರಿಸಲು ಇನ್ನೂ 10 ಸಾವಿರ ರೂ.ಗಳನ್ನು ವೃದ್ದ ಹೊಂದಿಸಬೇಕಿತ್ತು.
ಆ ವೇಳೆ ವೃದ್ಧರ ಸ್ಥಿತಿ ಕಂಡು ಮರುಗಿದ ಜಿಲ್ಲಾ ನ್ಯಾಯಾಧೀಶ ರಾಕೇಶ್ ಕುಮಾರ್ ಸಿಂಗ್ ಅವರು ತನ್ನ ಜೇಬಿನಿಂದ 10 ಸಾವಿರ ರೂ.ಗಳನ್ನು ತೆಗೆದು ವೃದ್ಧರ ಕೈಗಿತ್ತಿದ್ದಾರೆ. ಆ ಮೂಲಕ ಬಾಕಿ ಪಾವತಿಯನ್ನು ಪೂರ್ಣಗೊಳಿಸುವಲ್ಲಿ ನೆರವಾದರು.
ಇನ್ನು ನ್ಯಾಯಾಧೀಶರು ನನಗೆ ದೇವರ ರೂಪದಲ್ಲಿ ಬಂದು ಸಹಾಯ ಮಾಡಿದರು ಎಂದು ವೃದ್ದ ಚೌಹಾಣ್ ಸುದ್ದಿಗಾರರ ಬಳಿ ನೊಂದ ಕಣ್ಣೀರಿನೊಂದಿಗೆ ತನ್ನ ಸ್ಥಿತಿಯನ್ನು ಹಂಚಿಕೊಂಡಿದ್ದಾರೆ.