Search By Date & Category

NEWSನಮ್ಮಜಿಲ್ಲೆನಮ್ಮರಾಜ್ಯ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.19ರಿಂದ ಬೆಳಗಾವಿಯಲ್ಲಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ 2021ರ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದಲ್ಲಿ ವಜಾಗೊಂಡಿರುವ ನೌಕರರಲ್ಲಿ ಇನ್ನೂ 584 ಸಿಬ್ಬಂದಿಗಳನ್ನು ತೆಗೆದುಕೊಂಡು ಡ್ಯೂಟಿಕೊಡದೆ ತಾರತಮ್ಯ ಧೋರಣೆ ಅನುಸರಿಸುತ್ತಿರುವುದನ್ನು ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಖಂಡಿಸಿದೆ.

ಇನ್ನು ಉಳಿದ ಎಲ್ಲ ವಜಾಗೊಂಡ ನೌಕರರನ್ನು ಬೇಷರತ್ತಾಗಿ ಮರು ನೇಮಕ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವೇದಿಕೆ ವತಿಯಿಂದ ಡಿ.19ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕುಟುಂಬ ಸದಸ್ಯರೊಂದಿಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ವೇಳೆ ಹೋರಾಟ ಆರಂಭಿಸಲು ಉದ್ದೇಶಿಸಿದ್ದು, ಸೇವೆ ನಿಲ್ಲಿಸದೆ ವಾರದ ರಜೆ ಇರುವ ನೌಕರರು ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ನಾಲ್ಕೂ ಸಾರಿಗೆ ನಿಗಮಗಳ ಸಿಬ್ಬಂದಿ ಮತ್ತು ಕುಟುಂಬದವರಿಗೆ ಕರೆ ನೀಡಿದ್ದಾರೆ.

ಇನ್ನು ನಿವೃತ್ತರಾದ ತಕ್ಷಣ ಗ್ರಾಚ್ಯಟಿ ಹಣ ನೀಡಬೇಕು, ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಸರ್ಕಾರವೇ ಹೊರಡಿಸಿದ ಸುತ್ತೋಲೆಯಂತೆ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂಬುವುದು ಸೇರಿದಂತೆ ಸಾರಿಗೆ ಸಚಿವರಿಂದ ಸರ್ಕಾರ ಲಿಖಿತವಾಗಿ ಕೊಟ್ಟಿರುವ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಳೆದ ಅಕ್ಟೋಬರ್‌ 10ರಿಂದ ನವೆಂಬರ್‌ 25ರವರೆಗೂ 1938 ಕಿಮೀ ಸೈಕಲ್ ಜಾಥಾ ನಡೆಸಿ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ ಬೇಡಿಕೆ ಪೂರ್ಣ ಪ್ರಮಾಣದಲ್ಲಿ ಈಡೇರದ ಕಾರಣ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಇನ್ನು ಅಧಿವೇಶದಲ್ಲಾದರೂ ನಮ್ಮ ಬೇಡಿಕೆ ಈಡೇರದಿದ್ದರೆ ಮತ್ತೆ ಉಪವಾಸ ಸತ್ಯಾಗ್ರಹ ಮುಂದುವರಿಯಲಿದ್ದು ಜನವರಿಯಲ್ಲಿ ಇನ್ನಷ್ಟು ತೀವ್ರಗೊಳಿಸಲು ವೇದಿಕೆ ನಿರ್ಧರಿಸಿದೆ ಎಂದು ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ  ನೀಡಿದರು.

ಸುದ್ದಿಗೋಷ್ಠಿಯಲ್ಲಿ, ಕೂಟದ ಅಧ್ಯಕ್ಷ ಚಂದ್ರಶೇಖರ್‌, ವರ್ಕರ್ಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಸ್‌.ನಾಗರಾಜು ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಇದ್ದರು.

Leave a Reply

error: Content is protected !!