
ಬೆಂಗಳೂರು: ಇಲ್ಲಿಯವರೆಗೂ ಐ ಲವ್ ಯು ನಂದಿನಿ ಅಂತಾ ಜಾಹೀರಾತು ಕೊಡ್ತಾ ಇದ್ರು. ಈಗ ಐ ಹೇಟ್ ಯು ನಂದಿನಿ ಜಾಹೀರಾತು ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೀಟರ್ ಹಾಲಿನ ದರ ಹೆಚ್ಚಳ ಮಾಡಿರುವುದಕ್ಕೆ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಾಲಿನ ದರ, ವಿದ್ಯುತ್ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಕಾಪಾಟೀಲ್‌ಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ನಿನ್ ಹೆಂಡ್ತಿಗೂ ಫ್ರೀ ನನ್ ಹೆಂಡ್ತಿಗೂ ಫ್ರೀ ಅಂತಾ ಸಿದ್ದರಾಮಯ್ಯ ಅವರು ಹೇಳುತ್ತಿದ್ದರು. ಈಗ ನಿನ್ ಹೆಂಡ್ತಿಗೂ ಟ್ಯಾಕ್ಸ್, ನನ್ ಹೆಂಡ್ತಿಗೂ ಟ್ಯಾಕ್ಸ್ ಅನ್ನಬೇಕು ಎಂದು ಟೀಕಿಸಿದರು.
ಸಿದ್ದರಾಮಯ್ಯ ಬಜೆಟ್ ಮೋಸದ ಬಜೆಟ್, ಇದು ಸುಳ್ಳು, ಮುಂದೆ ಮಾರಿಹಬ್ಬ ಇದೆ ಎಂದು ಹೇಳಿದ್ದೆ. ತೆರಿಗೆ ಹಾಕುವಂತದ್ದೇ ಬಜೆಟ್, ಏನೇನು ತೆರಿಗೆ ಮಾಡುತ್ತೇವೆ, ಏನು ತೆರಿಗೆ ಹಾಕುತ್ತೇವೆ ಎಂದು ಹೇಳಲಿಲ್ಲ. ಮೋಸ ಮಾಡುವುದರಲ್ಲಿ ದೇಶದಲ್ಲಿ ಸಿದ್ದರಾಮಯ್ಯ ನಂಬರ್ 1. ಏನೇನು ತೆರಿಗೆ ಹಾಕುತ್ತೇವೆ ಎನ್ನುವುದನ್ನು ಬಚ್ಚಿಟ್ಟರು. ಈಗ ರಾಜ್ಯದ ಜನರನ್ನು ಮಾರಿಹಬ್ಬದ ಹರಕೆ ಕುರಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಜೆಟ್ ಆಗಿ 10 ದಿನನೂ ಆಗಿಲ್ಲ. ಸರ್ಕಾರದ ತಿಥಿಯೂ ಆಗಿಲ್ಲ. ಆಗಲೇ ದರ ಏರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಬಂದ ಮೇಲೆ 9 ರೂ. ಹಾಲಿನ ದರ ಏರಿಕೆ ಆಗಿದೆ. ಇದು ಕಾಂಗ್ರೆಸ್‌ನ ಮನೆ ಹಾಳು ಕೆಲಸ ಎಂದು ವಾಗ್ದಾಳಿ ನಡೆಸಿದರು.
ಯುಗಾದಿ ಹಬ್ಬಕ್ಕೆ ಸರ್ಕಾರ ಶಾಕ್ ನೀಡಿದೆ. ಮತ್ತೊಂದೆಡೆ ಡಿಕೆಶಿ ನೀರಿನ ದರ ಏರಿಕೆ ಮಾಡಲು ಹೊರಟಿದ್ದಾರೆ. ನೀರಿನ ದರ ಏರಿಕೆಯ ಮತ್ತೊಂದು ದೆವ್ವ ಬಾಗಿಲಿಗೆ ಬಂದು ನಿಂತಿದೆ. ಚುನಾವಣೆಗೂ ಮುಂಚೆ ಕಾಂಗ್ರೆಸ್ ಜನರೇ ದೇವರು ಎಂದು ಹೇಳಿದ್ದರು.
ಆದರೆ, ಈಗ ಎಲ್ಲರಿಗೂ ಟ್ಯಾಕ್ಸ್, ಮುಂದೆ ಗ್ರೀನ್ ಟ್ಯಾಕ್ಸ್ ಹಾಕುತ್ತಾರೆ. ಗಾಳಿ ಒಂದು ಬಿಟ್ಟು ಎಲ್ಲದಕ್ಕೂ ತೆರಿಗೆ ಹಾಕಿದ್ದಾರೆ. ಬ್ರಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಬಂತು. ಮುಂದೆ ಜನರಿಗೆ ಬೆಲೆ ಏರಿಕೆಯ ಮತ್ತಷ್ಟು ತ್ರಿಬಲ್ ಧಮಾಕಾ ಆಗಲಿದೆ ಎಂದರು.
ಇನ್ನು ಸಚಿವ ರಾಜಣ್ಣ ಅವರ ನೋಟಿನ ಪ್ರಿಂಟಿಂಗ್ ಮೆಷಿನ್ ಇಟ್ಟುಕೊಂಡಿಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದೆಲ್ಲ ಅವರ ದುರಹಂಕಾರದ ಪರಮಾವಧಿ, ಜನರು ಇವರ ಆಟಗಳನ್ನು ನೋಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.