Wednesday, October 30, 2024
NEWSನಮ್ಮಜಿಲ್ಲೆನಮ್ಮರಾಜ್ಯ

ಸರ್ಕಾರ ಸಾರಿಗೆ ನೌಕರರಿಗೆ ಕೊಟ್ಟ ಮಾತಿನಂತೆ ಸಮಾನ ವೇತನ ಕೊಡಬೇಕು : ಸಚಿವ ಪ್ರಭು ಚೌವ್ಹಾಣ್‌ಗೆ KSRTCಕೂಟ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರಿಗೆ ಸರ್ಕಾರ ಕೊಟ್ಟ ಮಾತಿನಂತೆ ಸರ್ಕಾರಿ ನೌಕರರಂತೆ ಸಮಾನ ವೇತನ, ವೇತನ ಆಯೋಗ ಮಾದರಿಯಲ್ಲಿ ನೀಡುವುದು ಹಾಗೂ ಇತರೆ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವಂತೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ಅವರಿಗೆ ಮನವಿ ಸಲ್ಲಿಸಲಾಯಿತು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಜಿಲ್ಲೆಯ ಔರಾದ್ ತಾಲೂಕಿನ ಸಚಿವರ ಕಚೇರಿಯಲ್ಲಿ ಅವರನ್ನು ಭಾನುವಾರ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.

ಸದಾ ಸಾರ್ವಜನಿಕರ ಸೇವೆ ಮಾಡುವ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಸುಮಾರು 1.10 ಲಕ್ಷ (ಒಂದು ಲಕ್ಷ ಹತ್ತು ಸಾವಿರ) ನೌಕರರು ಹಗಲು-ರಾತ್ರಿ ಎನ್ನದೆ, ಆತೀ ಒತ್ತಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಹಬ್ಬ ಹರಿದಿನಗಳಲ್ಲಿ ನಮ್ಮ ಕುಟುಂಬಗಳ ಜೊತೆ ಇರಲು ಆಗುವುದಿಲ್ಲ. ಬಂಧು ಬಳಗದ ಯಾವುದೇ ಶುಭ ಸಮಾರಂಭಗಳಲ್ಲಿಯೂ ಸಹ ಪಾಲ್ಗೊಳ್ಳಲಾಗದೇ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ.

ಇನ್ನು ಸರಿಯಾದ ಊಟ ಉಪಚಾರವಿಲ್ಲದೆ, ಸಮಯಕ್ಕೆ ಸರಿಯಾಗಿ ನಿದ್ರೆ, ವಿಶ್ರಾಂತಿ ಇಲ್ಲದೇ, ಮಳೆ, ಗಾಳಿ ಎನ್ನದೆ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಸಿಬ್ಬಂದಿಗಳು ಕಾಯಾ, ವಾಚಾ, ಮನಸ್ಸಾ ದಿನಕ್ಕೆ ಸುಮಾರು ಒಂದು ಕೋಟಿ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ. ಈ ಕಾರಣದಿಂದಲೇ ನಮ್ಮ ಸಂಸ್ಥೆ ಇಡೀ ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆಯೆಂದು ಹೆಸರು ಮಾಡುವ ಮೂಲಕ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಆದರೆ, ಸರ್ಕಾರ ಮಾತ್ರ ತಮ್ಮ ಅಧೀನದಲ್ಲಿರುವ ಬೇರೆ ನಿಗಮ, ಇಲಾಖೆ ಹಾಗೂ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ಕೊಡಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರದ ಅಣತೆಯಂತೆ ನಡೆಯುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ತಾರತಮ್ಯ ದೋರಣೆ ಮಾಡುತ್ತಾ ಸಾರಿಗೆ ನೌಕರರ ಬಾಳನ್ನು ಅತ್ಯಂತ ಸ್ಥಿತಿಗೆ ತಲುಪಿಸಿದೆ. ಸರ್ಕಾರಿ ನೌಕರರ ವೇತನಕ್ಕೆ ನಮ್ಮ ವೇತನ ಹೋಲಿಸಿದ್ದರೆ ನಮ್ಮ ವೇತನ ಅತ್ಯಲ್ಪ (13% ರಿಂದ 40% ಕಡಿಮೆ ವೇತನ ) ಊರೂರು ಸುತ್ತುವ ಹಾಗೂ ಅತೀ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನಾವು ಅತೀ ಬೇಗ ರೋಗಗಳಿಗೆ ತುತ್ತಾಗುತ್ತಿದ್ದೇವೆ.

ಇನ್ನು ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಆರೋಗ್ಯ ಭಾಗ್ಯ ಸೌಲಭ್ಯ ಇಲ್ಲ. ನಿವೃತ್ತಿ ನಂತರ ನಿವೃತ್ತಿ ವೇತನ 1500 ರಿಂದ 2500 ರೂಪಾಯಿಗಳು. ಇದಿಷ್ಟೇ ಅಲ್ಲದೇ ಇನ್ನೂ ಹಲವು ಸೌಲಭ್ಯಗಳಿಂದ ಸಾರಿಗೆ ನೌಕರರು ವಂಚಿತರಾಗಿದ್ದಾರೆ. ಇದನ್ನೆಲ್ಲ ಮನಗಂಡ ಸಾರಿಗೆ ನೌಕರರು, ನೂರಾರು ಬಾರಿ ಶಾಸಕರಿಗೆ, ಮಂತ್ರಿಗಳಿಗೆ ಹಾಗೂ ಸರ್ಕಾರದ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡಿ ಅನೇಕ ರೀತಿಯ ಸಾರ್ವಜನಿಕರಿಗೆ ತೊಂದರೆಯಾಗದ ಶಾಂತಿಯುತ ಹೋರಾಟಗಳನ್ನು ಮಾಡಿದರು ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಲ್ಲ.

ಆ ಕಾರಣ ಅನಿರ್ವಾಯವಾಗಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಡಿಸೆಂಬರ್-2020 ರಲ್ಲಿ ಮುಷ್ಕರ ಮಾಡಿದ ಸಂದರ್ಭದಲ್ಲಿ ಸರ್ಕಾರ ಲಿಖಿತ ಭರವಸೆ ಹಾಗೂ 3 ತಿಂಗಳ ಕಲಾವಕಾಶವನ್ನು ಕೇಳಿದ್ದರಿಂದ ಮುಷ್ಕರವನ್ನು ಹಿಂಪಡೆಯಲಾಯಿತು. ತೆಗೆದುಕೊಂಡ ಕಾಲಾವಧಿಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸದ ಕಾರಣ ಏಪ್ರಿಲ್-2021 ರಲ್ಲಿ ಸಾರಿಗೆ ಮುಷ್ಕರ ಮಾಡಿದ ಸಂದರ್ಭದಲ್ಲಿ ಬೇಡಿಕೆಗಳನ್ನು ಈಡೇರಿಸುವ ಬದಲು ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಮತ್ತು ಆಮಾನತ್ತು ಮಾಡಲಾಯಿತು.

ಇನ್ನು ಸುಳ್ಳು ಪೊಲೀಸ್‌ ಕೇಸುಗಳನ್ನು ನೌಕರರ ಮತ್ತು ಕುಟುಂಬ ಸದಸ್ಯರ ಮೇಲೆ ದಾಖಲಿಸಲಾಯಿತು. ಬಿ.ಎಂ.ಟಿ.ಸಿ ನಿಗಮವನ್ನು ಹೊರತು ಪಡಿಸಿ 3 ನಿಗಮಗಳಲ್ಲಿ ಸಮಸ್ಯೆಗಳನ್ನು ಒಂದು ಹಂತಕ್ಕೆ ನಿವಾರಣೆ ಮಾಡಲಾಗಿದ್ದು, ಕಳೆದ ಹದಿನೇಳು ತಿಂಗಳುಗಳಿಂದ, ಬಿ.ಎಂ.ಟಿ.ಸಿ ಸಂಸ್ಥೆಯಲ್ಲಿ ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಆಡಳಿತ ಮಂಡಳಿಯ ಅಧಿಕಾರಿಗಳು ಮನಸೊ ಇಚ್ಛೆ ನೌಕರರ ಮೇಲೆ ದ್ವೇಷ ಸಾಧಿಸುತ್ತಿದ್ದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೂ ನಾನಾ ರೀತಿಯ ಮಾನಸಿಕ ಕಿರುಕುಳ ನೀಡುವ ಮೂಲಕ ನೌಕರರು ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತಿದ್ದಾರೆ.

ಹಗಲಿರುಳು ಸದಾ ಒತ್ತಡದಲ್ಲಿ ದುಡಿಯುವ ನಾವು ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು, ಕಾನೂನು ತೊಡಕುಗಳು ಎಂದು ಹೇಳುವ ಮತ್ತು ಸರಿ ಸಮಾನ ವೇತನ ಕೇಳಿದರೆ ಆರ್ಥಿಕ ನಷ್ಟ ಎಂದು ಹೇಳುವ ಸರ್ಕಾರ, ಸರ್ಕಾರದ ಇಲಾಖೆ ಮತ್ತು ನಿಗಮ ಮಂಡಳಿಗಳ ನೌಕರರಿಗೆ ಕೇಂದ್ರ ಸರ್ಕಾರಿ ಸರಿ ಸಮಾನ ವೇತನ, ದೇವಸ್ಥಾನದ ಆರ್ಚಕರಿಗೆ 6 ನೇ ವೇತನ ಆಯೋಗ, ಸ್ಮಶಾನ ಕಾಯುವ ನೌಕರರಿಗೆ ಸರಿಸಮಾನ ವೇತನ ಹಾಗೂ ಪೌರ ಕಾರ್ಮಿಕರು ಸರ್ಕಾರಿ ನೌಕರರು, ಇವರಿಗೆಲ್ಲ ನೀಡಿರುವುದಕ್ಕೆ ನಮ್ಮ ಹೊಟ್ಟೆ ಕಿಚ್ಚು ಇಲ್ಲ. ಆದರೆ ನಮ್ಮ ಜೀವನಗಳಿವೆ, ನಮ್ಮನು ನಂಬಿ ಕುಟುಂಬಗಳು ಇವೆ, ನಾವು ಸಹ ಈ ರಾಜ್ಯದ ಪ್ರಜೆಗಳೇ ನಮ್ಮ ಮೇಲೆಯೂ ಸಹ ಕರುಣೆ ತೋರಿಸಿ.

ಸಾರಿಗೆ ನೌಕರರ ಸಮಸ್ಯೆಗಳ ನಿವಾರಣೆಗಳಿಗೆ ಹಾಗೂ ಸರ್ಕಾರ ನೀಡಿರುವ ಲಿಖಿತ ಭರವಸೆಗಳ ಜತೆಗೆ ಬೇಡಿಕೆಗಳನ್ನು ಕೂಡಲೆ ಈಡೇರಿಸುವಂತೆ ಒತ್ತಾಯಿಸಿ ಇದೇ ಅ.10ರಿಂದ ಬಳ್ಳಾರಿಯಿಂದ ಪ್ರಾರಂಭ ಮಾಡಿ ಬೀದರ್‌ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅದೆ ರೀತಿ 50 ರಿಂದ 60 ದಿನಗಳ ವರೆಗೆ ರಾಜ್ಯಾದ್ಯಂತ ಸಾರಿಗೆ ನೌಕರರು ಸೈಕಲ್ ಜಾಥಾ ಮೂಲಕ ಪ್ರಯಾಣ ಮಾಡಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ರವಾನೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ಬೇಡಿಕೆಗಳು: 1) ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೇ ಈ ಕೂಡಲೇ ಮರು ನೇಮಕ ಮಾಡಿಕೊಳ್ಳವುದು, ಮುಷ್ಕರದ ಸಮಯದಲ್ಲಿ ಮಾಡಿರುವ ವರ್ಗಾವಣೆ ಹಾಗೂ ಇತರೆ ಶಿಕ್ಷೆಗಳನ್ನು ಯಾವುದೆ ನಿಬಂಧನೆಗಳನ್ನು ವಿಧಿಸದೆ ರದ್ದು ಮಾಡಿ, ದಿನಾಂಕ: 06/04/2021ರ ಪೂರ್ವದ ಯಥಾಸ್ಥಿತಿಯನ್ನು ಕಾಪಾಡುವುದು.

2) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೆ, ಸರ್ಕಾರಿ ನೌಕರರಂತೆ ಸಮಾನ ವೇತನವನ್ನು ನೀಡುವುದು. ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ಚೌಕಾಸಿ ವೇತನ ಪರಿಷ್ಕರಣಾ ಪದ್ಧತಿ ಕೈಬಿಟ್ಟು, ಸರ್ಕಾರದ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಿಕೊಳ್ಳುವುದು.

3) ಮುಷ್ಕರದ ಸಮಯದಲ್ಲಿ ನಾಲ್ಕು ನಿಗಮಗಳ ಸಾರಿಗೆ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ಪೊಲೀಸ್‌ ಪ್ರಕರಣಗಳನ್ನು ಹಿಂಪಡೆಯುವುದು.

4) ಸಾರಿಗೆ ನಿಗಮಗಳಲ್ಲಿ ಕೂಡಲೆ ಕಾರ್ಮಿಕ ಸಂಘಗಳ ಚುನಾವಣೆ ನಡೆಸುವುದು, (1992 ನಂತರ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆಗಳು ನಡೆದಿರುವುದಿಲ್ಲ)

5) ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಖಾಸಗಿಯವರಿಗೆ ವಹಿಸಿರುವುದು, ಇತರ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು ಮತ್ತು ಕೆಲವು ಮಾರ್ಗಗಳನ್ನು ಖಾಸಗಿ ವಾಹನಗಳ ಚಾಲನೆಗೆ ಅನುಮತಿ ನೀಡಿ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣದ ಮೂಲಕ ರಾಜ್ಯದ ಯುವಕರಿಗೆ ಮತ್ತಷ್ಟು ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿ ಮಾಡುವ ಯೋಜನೆಯನ್ನು ಈ ಕೂಡಲೆ ಕೈ ಬಿಡುವಂತೆ ನೌಕರರ ಕೂಟದ ರಾಜ್ಯಾಧ್ಯಕ್ಷ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ  ಬಿಎಂಟಿಸಿಯ ಉತ್ತಮ ಸೇವೆಗೆ ಸಂದ Award of Excellence ರಾಷ್ಟ್ರೀಯ ಪ್ರಶಸ್ತಿ: ನೌಕರರಿಗೆ ಅರ್ಪಿಸಿದ ಎಂಡಿ ರಾಮಚಂದ್ರನ್ BMTC ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಡಿಪೋ 30ರಲ್ಲಿ ಬಸ್‌ ತೆಗೆಯದೇ ಚಾಲಕರ ಪ್ರತಿ... BMTC: ಸೈಡ್‌ಗಾಗಿ ಹಾರನ್‌ ಮಾಡಿದಕ್ಕೇ ಚಾಲಕ, ನಿರ್ವಾಹಕರಿಗೆ ಹೊಡೆದು ಕಿಡಿಗೇಡಿಗಳು ಪರಾರಿ