ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ಕೃಷಿ ವಿಜ್ಞಾನ ಕೇಂದ್ರ. ಹಾಡೋನಹಳ್ಳಿ ಆವರಣದಲ್ಲಿ ರೈತರಿಗಾಗಿ ಅಟಲ್ ಭೂಜಲ್ ಯೋಜನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿಯಲ್ಲಿ ಬೆಂಗಳೂರು ಕೃಷಿ ಇಲಾಖೆ ಉಪ ನಿರ್ದೇಶಕರಾದ ಗಾಯತ್ರಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈಗ ಅಂತರ್ಜಲ ಕಡಿಮೆಯಾಗಿ 1600 ಅಡಿ ಆಳ ಹೋದರು ಬೋರ್‌ವೆಲ್ ನಲ್ಲಿ ನೀರು ಸಿಗುತ್ತಿಲ್ಲ. ಆದ್ದರಿಂದ ಮಳೆ ನೀರನ್ನು ಕೃಷಿ ಹೊಂಡದ ಮೂಲಕ ಹಾಗು ವಿವಿಧ ಕ್ರಮಗಳ ಮೂಲಕ ನೀರನ್ನು ಸದ್ಬಳಕೆ ಮಾಡಿಕೊಳ್ಳಿ. ನೀರಿನ ಮಿತ ಬಳಕೆ, ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಿ ಎಂದು ರೈತರಿಗೆ ಮಾಹಿತಿ ನೀಡಿದರು.
ದೊಡ್ಡಬಳ್ಳಾಪುರದ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಹನುಮಂತರಾಯ ಬಿ.ಜಿ. ರವರು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀರಿನ ಅಭಾವ ಕಾಡುತ್ತಿದೆ. ಲಭ್ಯವಿರುವ ನೀರಿನಲ್ಲಿ ಶೇ. 70 ರಷ್ಟು ಕೃಷಿಗೆ ಬಳಕೆ ಮಾಡಲಾಗುತ್ತಿದೆ ಹಾಗಾಗಿ ಮಳೆ ನೀರನ್ನು ಚೆನ್ನಾಗಿ ಶೇಖರಣೆ ಮಾಡಿ ಎಂದು ಹೇಳಿದರು.
ಇನ್ನು ಕೃಷಿಗೆ ಪರಿಮಾಮಕಾರಿಯಾಗಿ ನೂತನ ತಂತ್ರಜ್ಞಾನವಾದ sensor ಸ್ವಯಂಚಾಲಿತ ನೀರಾವರಿ ಮೂಲಕ ಭೂಮಿಗೆ ಎಷ್ಟು ನೀರು ಬೇಕೋ ಅಷ್ಟು ನೀರು ಕೊಟ್ಟು ನೀರಿನ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.
ತೋಟಗಾರಿಕೆ ಬೆಳೆಗಳಿಗೆ ಈ ಹೊಸ ತಂತ್ರಜ್ಞಾನ ಬಹಳ ಉಪಯುಕ್ತವೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕದ ನಿಷಿತ, ಕೃಷಿ ತಜ್ಞೆ ದೀಪ್ತಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಆರ್.ಕೆ. ಶಾಲಾದ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ಸುಮಂಗಲ, ಕೃಷಿ ಅಧಿಕಾರಿ ಶ್ರೀ ನವೀನ್ ಮತ್ತು ಶ್ರೀ ಕಸ್ತೂರಯ್ಯರವರು, ಜೈನ್ ನೀರಾವರಿ ಸಂಸ್ಥೆಯ ತೋಷಿತ್ ರೈ, ಫೈಲೋ ಸಂಸ್ಥೆಯ ಅನಿಲ್, ತಾಲ್ಲೂಕಿನ ಆತ್ಮ ಸಿಬ್ಬಂಧಿಗಳು ಹಾಗೂ ರೈತರು ಭಾಗವಹಿಸಿದ್ದರು.