ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದ ಅಗಸ್ಟ್ 15 ರವರೆಗೆ ಹಮ್ಮಿಕೊಂಡಿರುವ “ಹರ್ ಘರ್ ತಿರಂಗಾ”(ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ) ಅಭಿಯಾನಕ್ಕೆ ಪಾಲಿಕೆಯ ಎಲ್ಲ ವಲಯಗಳಲ್ಲಿ ಆಚರಿಸಲಾಯಿತು.
ಯಲಹಂಕ ವಲಯದಲ್ಲಿ ಪೌರಕಾರ್ಮಿಕರಿಗೆ ಧ್ವಜ ವಿತರಣೆ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಇಂದು ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಮಾನ್ಯ ಸ್ಥಳೀಯ ಶಾಸಕರಾದ ಎಸ್.ಆರ್.ವಿಶ್ವನಾಥ್ ರವರು ಪೌರಕಾರ್ಮಿಕರಿಗೆ ರಾಷ್ಟ್ರಧ್ವಜಗಳನ್ನು ವಿತರಿಸಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ಪಾಲಿಕೆ ಜಂಟಿ ಆಯುಕ್ತರಾದ ಪೂರ್ಣಿಮಾ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ತದನಂತರ ಹೆಬ್ಬಾಳ ಜಂಕ್ಷನ್ ನಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ಪಶ್ಚಿಮ ವಲಯ ಚಾಮರಾಜಪೇಟೆಯ ಮಕ್ಕಳ ಕೂಟ, ಗಾಂಧಿನಗರ, ಮಲ್ಲೇಶ್ವ ಜಂಕ್ಷನ್, ಆನಂದರಾವ್ ವೃತ್ತ, ಸ್ವಾತಂತ್ರ್ಯ ಉದ್ಯಾನವನ, ಗೋವಿಂದರಾಜನಗರ ಸೇರಿದಂತೆ ಇನ್ನಿತರೆ ಕಡೆ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು.
ಬೊಮ್ಮನಹಳ್ಳಿ ವಲಯದಲ್ಲಿ ಕಾರ್ಯಕ್ರಮ ಆಯೋಜನೆ: ಬೊಮ್ಮನಹಳ್ಳಿ ವಲಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಆರ್.ಬಿ.ಐ ಲೇಔಟ್ ಮೈದಾನದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿ, ಸದರಿ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು. ಅಲ್ಲದೆ ಪೌರಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಧ್ವಜಗಳನ್ನು ವಿತರಿಸಲಾಯಿತು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ದಕ್ಷಿಣ ವಲಯದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ(ಬಿಪಿನ್ ರಾವತ್ ಉದ್ಯಾನವನ)ದಲ್ಲಿ ಇಂದು ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಹಾಗೂ ಹರ್ ಘರ್ ತಿರಂಗ ಅಭಿಯಾನಕ್ಕೆ ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ ರಾಯಪುರ ರವರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಮಹೇಶ್ ಜೋಶಿ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಪಲಕ ಅಭಿಯಂತರರು ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಪಾಲಿಕೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ: ಪೂರ್ವ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಜಾಗೃತಿ ಜಾಥಾ ನಡೆಸಲಾಯಿತು. ಸದರಿ ಜಾಗೃತಿ ಜಾಥಾದಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಘನತ್ಯಾಜ್ಯ ವಿಭಾಗದ ತಂಡ, ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪುಲಕೇಶಿನಗರ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ಟೌನ್ ಹಾಲ್, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಹಾಗೂ ಗರುಡಾ ಮಾಲ್ ನಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆ: 1947ರಲ್ಲಿ ದೇಶದ ಸ್ವಾತಂತ್ರ್ಯದೊಂದಿಗ ಭಾರತ ಮತ್ತು ಪಾಕಿಸ್ತಾನ ವಿಭಜನೆಯಿಂದ ನೊಂದ ಲಕ್ಷಾಂತರ ಜನರ ಸಂಕಟ, ನೋವು ಮತ್ತು ನೋವನ್ನು ಬೆಳಕಿಗೆ ತರುವ ಸಲುವಾಗಿ ದಿನಾಂಕ: 14-08-2022 ರಂದು “ವಿಭಜನೆಯ ದುರಂತದ ಸ್ಮರಣೆಯ ದಿನ”ವನ್ನಾಗಿ ಆಚರಿಸುತ್ತಿದ್ದು, ಅದರ ಅಂಗವಾಗಿ ಇಂದು ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್), ಮೆಜೆಸ್ಟಿಕ್ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಸ್ವಾತಂತ್ರ್ಯ ಉದ್ಯಾನವನ, ಗರುಡಾ ಮಾಲ್ ಛಾಯಾಚಿತ್ರ ಪ್ರದರ್ಶನ(Exhibition) ಏರ್ಪಡಿಸಲಾಗಿತ್ತು.
ನಾಳೆ ಬೆಳಗ್ಗೆ ಯಲಹಂಕ ವಲಯ, ದಾಸರಹಳ್ಳಿ ವಲಯ ಹಾಗೂ ಮಧ್ಯಾಹ್ನದ ನಂತರ ಆರ್.ಆರ್.ನರ, ಬೊಮ್ಮನಹಳ್ಳಿ, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
ಬಸ್ ನಲ್ಲೂ ಧ್ವಜ ಮಾರಾಟ: ಇಂದು ಮುಂಜಾನೆಯಿಂದ ನಗರ ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್, ಪಾಲಿಕೆ ಕೇಂದ್ರ ಕಚೇರಿ ವೃತ್ತ, ಕೆ.ಆರ್.ಮಾರುಕಟ್ಟೆ ವೃತ್ತ, ವಿಕ್ಟೋರಿಯಾ ಆಸ್ಪತ್ರೆ ಬಸ್ ನಿಲ್ದಾಣ, ಕಲಾಸಿಪಾಳ್ಯ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ ಮುಂಭಾಗ, ಬಸವೇಶ್ವರ ವೃತ್ತ, ಕೃಷ್ಣ ಕೃಪಾ ವೃತ್ತ, ಮೆಟ್ರೊ ನಿಲ್ದಾಣ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಪಾಲಿಕೆ ಬಸ್ ಮೂಲಕ ಧ್ವಜ ಮಾರಾಟ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸುಮಾರು ಒಂದು ಕಿಲೋಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜ ಹಿಡಿದು ಸಾಗಿದ್ದು ಎಲ್ಲರ ಗಮನ ಸೆಳೆದು ಆಕರ್ಷಿಸಿತು. ಸಾವಿರಾರು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸರ್ಕಾರೇತರ ಸಂಘಟನೆಗಳ ಪದಾಧಿಕಾರಿಗಳು, ಸೇರಿದಂತೆ ಸಾರ್ವಜನಿಕರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು “ಭೋಲೋ ಭಾರತ್ ಮಾತಾಕಿ, ವಂದೇ ಮಾತರಂ” ಘೋಷಣೆಗಳೊಂದಿಗೆ ಜೈಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಒಟ್ಟಾರೆ ದೇವನಹಳ್ಳಿಯ ಪಟ್ಟಣದ ಪ್ರಮುಖ ರಸ್ತೆಗಳು ತ್ರಿವರ್ಣಮಯವಾಗಿದ್ದವು.
ಜಾಥಾ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ರೇವಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲೆಯ ಶಾಲಾ ಕಾಲೇಜುಗಳ ಪ್ರಾಂಶುಪಾಲರುಗಳು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.