ರಾಮನಗರ: ನಾನು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ. ಮುಂದಿನ ರಾಜಕೀಯ ಭವಿಷ್ಯವನ್ನು ಬಿಜೆಪಿಯಲ್ಲಿಯೇ ಕಳೆಯುತ್ತೇನೆ ಎಂದು ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಸ್ಪಷ್ಟ ಪಡಿಸಿದ್ದಾರೆ.
ನನ್ನನ್ನು ಸೆಳೆದುಕೊಂಡರೆ, ಅವರ ಪಕ್ಷ ಭದ್ರಗೊಳ್ಳಲಿದೆ ಎಂಬ ಕಾರಣಕ್ಕೆ ಇತರೆ ಪಕ್ಷಗಳೇ ಪ್ರತಿ 6 ತಿಂಗಳಿಗೊಮ್ಮೆ ನಾನು ಪಕ್ಷ ಬಿಡುತ್ತೇನೆ ಎಂಬ ವದಂತಿಗಳು ಹರಿದು ಬಿಡುತ್ತಿರಬಹುದು. ಈ ರೀತಿ ಅಪಪ್ರಚಾರ ಮಾಡಿದರೆ ಅವರಿಗೆ ಲಾಭವಾಗಲಿದೆ ಎಂ ಲೆಕ್ಕಾಚಾರದಲ್ಲಿ ಇಬಹುದು ಆರೋಪಿಸಿದರು.
2009ರಲ್ಲಿ ನಾನು ಬಿಜೆಪಿ ಸೇರಿದ್ದೆ. ಅಲ್ಲಿಂದ ಪಕ್ಷದ ವಿಚಾರ, ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದೇನೆ. ಈ ಹಿಂದೆ ಬಿಜೆಪಿ ಮೂರು ಭಾಗವಾಗಿದ್ದ ವೇಳೆ ಸ್ವತಂತ್ರ್ಯವಾಗಿ ನಿಂತು ಬಳಿಕ ಸಮಾಜವಾದಿ ಪಕ್ಷ ಸೇರಿದ್ದೆ. ನನಗೆ ಯಾವುದೇ ಸಂದರ್ಭದಲ್ಲಿಯೂ ಕಾಂಗ್ರೆಸ್ ಮಾತೃ ಪಕ್ಷ ಆಗಿರಲಿಲ್ಲ ಎಂದರು.
ನಾನು ಎಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಬಸ್ ಮಾಡಿ ಜನರನ್ನು ಕಳುಹಿಸಿಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ನಮ್ಮ ಪಕ್ಷದಿಂದ ಪ್ರಬಲ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ನಾನು ಮತದಾರರ ವೈಯಕ್ತಿಕ ಅಭಿಪ್ರಾಯಕ್ಕೆ ಚುನಾವಣೆ ಬಿಟ್ಟಿದ್ದೆ ಎಂದು ತಿಳಿಸಿದರು.
ಇನ್ನು ‘ಕಾಂಗ್ರೆಸ್ ಜತೆ ನಾನು ನಂಟು ಕಳೆದುಕೊಂಡು ಸಾಕಷ್ಟು ವರ್ಷ ಕಳೆದಿವೆ. ಇತರೆ ಪಕ್ಷಗಳು ನನ್ನನ್ನು ಸಂಪರ್ಕಿಸುವ ಧೈರ್ಯ ಮಾಡುವುದಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರಲು ಬಿಜೆಪಿ ಮೂರು ಭಾಗವಾಗಿದ್ದೇ
ಕಾರಣ. ಆದರೆ, ಈಗ ಅಂತಹ ಸನ್ನಿವೇಶ ಇಲ್ಲ. ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠ ಆಗುತ್ತಿದ್ದು, ಸದ್ಯದಲ್ಲೇ ಇನ್ನಷ್ಟು ಶಾಸಕರು ಪಕ್ಷಕ್ಕೆ ಬರಲಿದ್ದಾರೆ ಎಂದರು.
ಇದರ ನಡುವೆ ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಡಿ.ಕೆ.ಶಿವಕುಮಾರ್ ನನ್ನ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿದ್ದರು. ಅವರ ಇಂದಿನ ಕಷ್ಟ ನೋಡಿ ನಾನು ಅವರಿಗೆ ಬೈಯುವುದನ್ನು ನಿಲ್ಲಿಸಿದ್ದೇನೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಚನ್ನಪಟ್ಟಣವನ್ನು ಚಿನ್ನದ, ಚೆಂದದ ಪಟ್ಟಣ ಮಾಡುತ್ತೇನೆ ಎಂದಿದ್ದರು. ಜನರ ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ಪಡೆದು ಸಾಲ ಮನ್ನ ಮಾಡುತ್ತೇನೆ ಎಂದು ಮುಗ್ದ ಜನರನ್ನು ವಂಚಿಸಿದ್ದಾರೆ ಎಂದು ಕಿಡಿಕಾರಿದರು.
ಈಗ ಚುನಾವಣೆ ವೇಳೆ ಇಬ್ಬರು ಗುತ್ತಿಗೆದಾರರನ್ನು ಇಟ್ಟುಕೊಂಡಿದ್ದಾರೆ. ಗೊವಿಂದಹಳ್ಳಿ ನಾಗರಾಜನಿಗೆ ಗಲಾಟೆ ಮಾಡಿ ಟೆಂಡರ್ ನೀಡಿದ್ದಾರೆ. ಇತರ ಗುತ್ತಿಗೆದಾರರಿಗೆ ಧಮ್ಕಿ ಹಾಕುತ್ತಾರೆ. ಅವರು ಗೆದ್ದಿರುವ ಕೌನ್ಸಿಲ್ ಕ್ಷೇತ್ರಕ್ಕಷ್ಟೆ ಟೆಂಡರ್ ಪಾಸ್ ಮಾಡಿದ್ದಾರೆ ಎಂದು ಆರೋಪಿಸಿದರು.
ಇನ್ನು ಬಸ್ ನಿಲ್ದಾಣ ಇಲ್ಲ ಎಂದು ಜನರು ಮನವಿ ಮಾಡಿದರೆ ಕೂಗಾಡುತ್ತಾರೆ. ಚನ್ನಪಟ್ಟಣದಲ್ಲಿ ರಸ್ತೆ, ನೀರು, ಯುಜಿಡಿ ಸೇರಿದಂತೆ ಯಾವೊಂದು ಸೌಲಭ್ಯವೂ ಅಭಿವೃದ್ಧಿ ಆಗಿಲ್ಲ ಎಂದು ದೂರಿದರು.