ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಆದರೆ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟಿದೆ. ಪರ್ಯಾಯ ನಾಯಕ ಇಲ್ಲವೆಂಬ ಮಾತನ್ನು ನಾನು ಒಪ್ಪಲ್ಲ. ದೇಶ, ರಾಜ್ಯದಲ್ಲಿ ಪರ್ಯಾಯ ನಾಯಕರು ಇರುತ್ತಾರೆ ಎಂದು ಬಿಎಸ್ವೈ ಹೇಳಿದರು.
ಇನ್ನು ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದ್ದು, ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತಾರೋ, ಅಲ್ಲಿಯವರೆಗೂ ನಾನು ಮುಂದುವರಿಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ. ಆ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.
ನನ್ನ ಮೇಲೆ ಹೈಕಮಾಂಡ್‌ಗೆ ವಿಶ್ವಾಸವಿರುವವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಮುಂದುವರಿಯುತ್ತೇನೆ. ಯಡಿಯೂರಪ್ಪ ನೀವು ಬೇಡ ಅಂದ್ರೆ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಕೊಟ್ಟು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ನಾನು ಯಾವುದೇ ಗೊಂದಲದಲ್ಲಿ ಇಲ್ಲ. ಇನ್ನು ಕೆಲ ಸಚಿವರಿಂದ ನಾಯಕತ್ವ ಬದಲಾವಣೆ, ಕೆಲಸ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು ನಾನು ಯಾರ ಬಗ್ಗೆಯೂ ಟೀಕೆ ಟಿಪ್ಪಣಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಸಿಎಂ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಮಾತನಾಡಿದ ಬೆನ್ನಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಈ ರಾಜ್ಯ ಸರ್ಕಾರದ ಹಣೆಬರಹ ಬದಲಾವಣೆಯಾಗಲ್ಲ. ಇವರಿದ್ದರೂ ಇಷ್ಟೇ, ಹೊಸ ಸಿಎಂ ಬಂದರೂ ಇಷ್ಟೇ ಇರುತ್ತೆ. ಇದು ಹಣ ಹೂಡಿಕೆ ಮಾಡಿ ಬಂದಿರುವ ಸರ್ಕಾರವಾಗಿದೆ. ಈಗ ಇವರು ಹಣ ಗಳಿಸಬೇಕಲ್ಲವಾ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ನಾಯಕರನ್ನು ಸೃಷ್ಟಿಸುವ ಶಕ್ತಿ ಜನರಿಗಿದೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದವರನ್ನೆಲ್ಲಾ ಮರೆಯುತಿದ್ದಾರೆ. ಈಗ ಹೊಸ ನಾಯಕರು ಸೃಷ್ಟಿಯಾಗುತ್ತಿದ್ದಾರೆ. ಆಡಳಿತ ನಡೆಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಯಡಿಯೂರಪ್ಪನವರು ರಾಜೀನಾಮೆ ಬಗ್ಗೆ ಮಾತನಾಡಿದರೆ, ರಾಜ್ಯದ ಜನರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಇವರು ಪಕ್ಷದ ಚೌಕಟ್ಟಿನಲ್ಲಿ ಈ ಬಗ್ಗೆ ಮಾತನಾಡಿಕೊಳ್ಳಲಿ. ಆಂತರಿಕ ಸಮಸ್ಯೆ ಬಗ್ಗೆ 4 ಗೋಡೆ ಮಧ್ಯೆ ಮಾತನಾಡಿಕೊಳ್ಳಲಿ. ಮೊದಲೇ ಸರ್ಕಾರದ ಬಗ್ಗೆ ರಾಜ್ಯದ ಜನರಿಗೆ ಬೇಸರವಿದೆ. ಇಂತಹ ಸಂದರ್ಭದಲ್ಲಿ ಸಿಎಂ ಇಂತಹ ಹೇಳಿಕೆ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.