NEWSನಮ್ಮರಾಜ್ಯಸಂಸ್ಕೃತಿ

ಒಕ್ಕಲಿಗರ ಮೀಸಲಾತಿ ಶೇ.4ರಿಂದ ಶೇ.10ಕ್ಕೆ  ಹೆಚ್ಚಿಸಿ: ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಅಧ್ಯಕ್ಷ ದೇವರಾಜ್ ಆಗ್ರಹ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಒಕ್ಕಲಿಗರಿಗೆ ಮೀಸಲಾತಿ ಲಭ್ಯವಾಗುತ್ತಿರುವ ಹಿಂದುಳಿದ ಪ್ರವರ್ಗಗಳ 3ಎ ಮೀಸಲಾತಿಯನ್ನೂ ಶೇ.4ರಿಂದ ಶೇ.10ಕ್ಕೆ ಹೆಚ್ಚಳ ಮಾಡಬೇಕೆಂದು ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಅಧ್ಯಕ್ಷ ಸಿ.ವಿ.ದೇವರಾಜ್ ಸರಕಾರವನ್ನು ಆಗ್ರಹಿಸಿದ್ದಾರೆ.

ಎಸ್ ಸಿ ಮತ್ತು ಎಸ್ ಟಿ ವರ್ಗಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದಕ್ಕೆ ರಾಜ್ಯ ಸರಕಾರವನ್ನು ಅಭಿನಂದಿಸುತ್ತೇವೆ. ಈ ವರ್ಗಗಳ ಮಿಸಲಾತಿ ಹೆಚ್ಚಳ ಮಾಡಿರುವುದನ್ನು ಇಡೀ ಒಕ್ಕಲಿಗ ಸಮುದಾಯ ಸ್ವಾಗತ ಮಾಡುತ್ತದೆ. ಹಾಗೆಯೇ ಒಕ್ಕಲಿಗ ಸಮುದಾಯ ಮೀಸಲಾತಿಯನ್ನು ಪಡೆಯುತ್ತಿರುವ ಹಿಂದುಳಿದ ವರ್ಗಗಳ ಪ್ರವರ್ಗ 3ಎ ಮೀಸಲಾತಿಯನ್ನು ಶೇ.4ರಿಂದ ಶೇ.10ಕ್ಕೆ ಹೆಚ್ಚಳ ಮಾಡಬೇಕೆಂದು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ಒಕ್ಕಲಿಗ ಸಮುದಾಯ ರಾಜ್ಯದ ಜನಸಂಖ್ಯೆಯಲ್ಲಿ 80ರಿಂದ 90ಲಕ್ಷದಷ್ಟಿದ್ದು ಒಟ್ಟು ಜನಸಂಖ್ಯೆಯಲ್ಲಿ ಶೇ.17ರಷ್ಟಿದೆ. 3ಎ ಅಡಿಯಲ್ಲಿ ಒಕ್ಕಲಿಗ ಮಾತ್ರವಲ್ಲದೆ ರೆಡ್ಡಿ, ಬಲಿಜ, ಕೊಡವ, ಬಂಟ ಸೇರಿದಂತೆ 12 ಜಾತಿಗಳು ಸೇರಿವೆ. ಮೀಸಲಾತಿ ಕೂಗು ನಿನ್ನೆ ಮೊನ್ನೆಯದಲ್ಲ. ದಶಕಗಳಿಂದ ಒತ್ತಾಯ ಕೇಳಿ ಬರುತ್ತಿದೆ. “ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲಾ” ಎಂಬ ನಾಣ್ಣುಡಿಯಂತೆ ಒಕ್ಕಲಿಗ ಕೃಷಿಯನ್ನು ಕೈಬಿಟ್ಟರೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ. ಆದ್ದರಿಂದ ಕೃಷಿಯನ್ನೇ ಅವಲಂಬಿಸಿರುವ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಳ ಮಾಡಿದರೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ಸಮುದಾಯಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬೇಡಿಕೆ ಇಟ್ಟಿರುವಾಗ ಒಕ್ಕಲಿಗ ಸಮುದಾಯದಲ್ಲೂ ಶೇ.80ರಷ್ಟು ಬಡವರಿದ್ದಾರೆ. ಇವರೆಲ್ಲರೂ ಕೃಷಿಯನ್ನೇ ಕಾಯಕವನ್ನಾಗಿ ಅವಲಂಬಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಒಣ ಬೇಸಾಯವನ್ನೇ ನೆಚ್ಚಿಕೊಂಡಿದ್ದಾರೆ. ಕೃಷಿ ದುಬಾರಿಯಾಗುತ್ತಿದ್ದು, ಇತ್ತ ಕೃಷಿಯನ್ನು ಬಿಡಲಾರದೆ ಅತ್ತ ಪರ್ಯಾಯ ಮಾರ್ಗವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾನೆ.

ಕೃಷಿ ಉತ್ಪನ್ನಗಳಿಗೆ ಸಮರ್ಪಕ ಮಾರುಕಟ್ಟೆ ಇಲ್ಲದೆ ಹೈರಾಣಾಗಿದ್ದಾನೆ. ಶಿಕ್ಷಣ ದುಬಾರಿಯಾಗಿದ್ದು, ಉನ್ನತ ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತೇರ್ಗಡೆಯಾಗುವುದು ಗಗನ ಕುಸುಮವಾಗಿದೆ. ಮೀಸಲಾತಿ ಲಭ್ಯವಾದರೆ ಕೃಷಿಕರ ಮಕ್ಕಳೂ ಉನ್ನತ ಸ್ಥಾನಗಳಿಗೆ ಏರಲು ಅವಕಾಶವಾಗುತ್ತದೆ ಎಂದು ತಿಳಿಸಿದ್ದಾರೆ.

ಮೀಸಲಾತಿ ಪ್ರಮಾಣ ಶೇ.50 ಮೀರಿರುವ ಉದಾಹರಣೆಗಳಿವೆ. ಹರಿಯಾಣ-ಶೇ.70, ತಮಿಳುನಾಡು-ಶೇ.69, ರಾಜಸ್ಥಾನ-ಶೇ. 54, ಮಹಾರಾಷ್ಟ್ರ-ಶೇ.68ರಷ್ಟು ಮಿಸಲಾತಿ ಕಲ್ಪಿಸಿವೆ. ವೈಜ್ಞಾನಿಕ ದಾಖಲೆಗಳು ಲಭ್ಯವಿದ್ದಲ್ಲಿ ರಾಜ್ಯ ಸರಕಾರಗಳು ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಬಹುದು ಎಂಬ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ. ಹಾಗಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಯಾವುದೇ ಕಾನೂನು ತೊಡಕು ಇಲ್ಲ ಮತ್ತು ಇದರಿಂದ ಯಾವುದೇ ಸಮಾಜಕ್ಕೂ ಅನ್ಯಾಯವಾಗುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಪ್ರವರ್ಗ 3ಎ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸಲು ಕಾರ್ಯಪ್ರವೃತ್ತರಾಗಬೇಕು.

ಮುಂಬರುವ ಸಾರ್ವತ್ರಿಕ ಚುನಾವಣೆಯ ಒಳಗಾಗಿ ಮೀಸಲಾತಿ ಹೆಚ್ಚಳ ಮಾಡುತ್ತಾರೆ ಎಂಬ ಅದಮ್ಯ ವಿಶ್ವಾಸ ಹೊಂದಲಾಗಿದೆ. ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡಲು ಸರಕಾರದ ಮೇಲೆ ಒತ್ತಡ ಹೇರುವಂತೆ ಎಲ್ಲ ಒಕ್ಕಲಿಗ ಸಚಿವರು, ಶಾಸಕರು, ಸಂಸದರು ಮತ್ತು ಮೂರೂ ಪಕ್ಷಗಳ ಒಕ್ಕಲಿಗ ಮುಖಂಡರು ಮತ್ತು ಸಮುದಾಯದ ನಾಯಕರಿಗೆ ಪತ್ರ ಬರೆಯಲಾಗಿದೆ. ಮುಂಬರುವ ದಿನಗಳಲ್ಲಿ ಸಮುದಾಯದ ಗುರುವರ್ಯರ ಮಾರ್ಗದರ್ಶನ ಮತ್ತು ಮುಖಂಡರ ನೇತೃತ್ವದಲ್ಲಿ ಚಳವಳಿಯನ್ನು ರೂಪಿಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಒಕ್ಕೂಟ ಅಧ್ಯಕ್ಷ ಸಿ.ವಿ.ದೇವರಾಜ್ ತಿಳಿಸಿದ್ದಾರೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ