ಬೆಂಗಳೂರು: ಸರ್ಕಾರ ಆಚರಿಸುವ ಕನ್ನಡ ರಾಜ್ಯೋತ್ಸವ ತೋರಿಕೆಗಾಗಿ ಆಚರಣೆ ಆಗಬಾರದು ರಾಜ್ಯ ರೈತ ಸಂಘಟನೆಗಳ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ದಿವಂಗತ ಜಿ.ನಾರಾಯಣ ಕುಮಾರ್ ನೇತೃತ್ವದ ಗುರುದೇವ ನಾರಾಯಣ ಕುಮಾರ್ ಕನ್ನಡ ಚಳವಳಿ ಕೇಂದ್ರ ಸಮಿತಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
50 ವರ್ಷಗಳ ರಾಜ್ಯೋತ್ಸವ ನೆನಪಿಗಾಗಿ ನ್ಯಾಯಾಂಗ ವ್ಯವಸ್ಥೆಯು ಕಂದಾಯ ಇಲಾಖೆ, ನ್ಯಾಯಾಂಗ ಆದೇಶಗಳು, ವಾದ ವಿವಾದಗಳ ಆದೇಶಗಳು ಕನ್ನಡದಲ್ಲಿ ಹೊರಬೀಳುವಂತೆ ಮಾಡಬೇಕು. ಆಂಗ್ಲ ಆದೇಶಗಳು ನಿಲ್ಲಬೇಕು ಎಂದು ಒತ್ತಾಯಿಸಿದರು.
ಇನ್ನು ಗ್ರಾಮೀಣ ಭಾಗದ ರೈತರಿಗೆ ಬ್ಯಾಂಕ್‌ಗಳ ಜತೆ ವ್ಯವಹಾರಿಸಲು ಈಗ ಕನ್ನಡ ಗೊತ್ತಿಲ್ಲದ ಹೊರ ರಾಜ್ಯದ ವ್ಯವಸ್ಥಾಪಕರ ಕಾರ್ಯನಿರ್ವಾಹಣೆಯಿಂದ ಕಷ್ಟವಾಗುತ್ತಿದೆ. ಕನ್ನಡದ ಮಾತನಾಡುವ ವ್ಯವಸ್ಥಾಪಕರ ನೇಮಿಸಲು ರಾಜ್ಯ ಸರ್ಕಾರ ಕಠಿಣ ಸೂಚನೆ ನೀಡಬೇಕು. ಅದಕ್ಕೆ ಆಡಳಿತಾತ್ಮಕವಾಗಿ ಯಾವುದೇ ಖರ್ಚು ಬರುವುದಿಲ್ಲ, ರೈತರ ಪರ ಎಂದು ಹೇಳುತ್ತಾ ಸರ್ಕಾರ ಮಣ್ಣಿನ ಮಕ್ಕಳ ಬಾಯಿಗೆ ಮಣ್ಣು ಹಾಕಿ ಬೀದಿ ಪಾಲು ಮಾಡುವ ನೀಚ ರಾಜಕಾರಣವನ್ನು ಮಂತ್ರಿಗಳು ಬಿಡಬೇಕು ಎಂದರು.
ರೈತರಿಗೆ ದ್ರೋಹ ಮಾಡುವುದನ್ನು ನಿಲ್ಲಿಸಲಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಲಾಬಿಗಳು ನಡೆಯುವುದನ್ನು ತಪ್ಪಿಸಲಿ, ಕನ್ನಡದ ಶಕ್ತಿ ಹೆಚ್ಚಿಸುವ ಆಡಳಿತ ನಡವಳಿಕೆಗಳು ಜಾರಿಗೆ ಬರಲಿ ಎಂದು ರಾಜ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
ನಾಡಿನ ಅನ್ನದಾತರನ್ನು ನೆನೆಯುವ ಸಲುವಾಗಿ ಪ್ರಗತಿಪರ ರೈತ ಕೆ.ಜಿ. ಗುರುಸ್ವಾಮಿ ಅವರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಆರಂಭದಲ್ಲಿ ಮುಖ್ಯಮಂತ್ರಿ ಚಂದ್ರು ಮಾತನಾಡಿ ಸರ್ಕಾರಗಳು ರಾಜ್ಯೋತ್ಸವದ ಹೆಸರಿನಲ್ಲಿ ಇಬ್ಬಗೆ ನೀತಿಯನ್ನು ಅನುಸರಿಸಬಾರದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಕನ್ನಡದ ಸಮಸ್ಯೆಗಳನ್ನು ಅರಿತಿದ್ದಾರೆ ಅವರಿಂದಲೂ ಕನ್ನಡಕ್ಕೆ ನ್ಯಾಯ ಸಿಗುತ್ತಿಲ್ಲ ಎಂದರು.
ಪ್ರಸ್ತಾವಿಕವಾಗಿ ಗುರುದೇವ್ ನಾರಾಯಣ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಹತ್ತು ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.