ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎರಡು ಬಸ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟು, ಚಾಲಕರು ಸೇರಿಂದತೆ 10ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.
ಜಿಲ್ಲೆ ಬಸನವಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ಸಾಜೀದಾ ಬೇಗಂ (36), ಕಲಬುರಗಿ ಪಟ್ಟಣದ ನಿವಾಸಿ ರೋಹಿಣಿ ಪಂಚಾಳ (31) ಮೃತಪಟ್ಟಿದ್ದು, ಕೆಕೆಆರ್‌ಟಿಸಿಯ ಎರಡೂ ಬಸ್ ಚಾಲಕರು ಸೇರಿದಂತೆ ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
ಸಿಂದಗಿ ಮಾರ್ಗವಾಗಿ ವಿಜಯಪುರಕ್ಕೆ ಬರುತ್ತಿದ್ದ ಬಸ್ ಹಾಗೂ ವಿಜಯಪುರದಿಂದ ಸಿಂದಗಿಗೆ ಹೋಗುತ್ತಿದ್ದ ಬಸ್ ನಡುವೆ ಈ ಅವಘಡ ಸಂಭವಿಸಿದೆ ಎಂದು ಘಟನೆ ಕುರಿತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಪಘಾತಕ್ಕೊಳಗಾದ ಬಸ್ಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅಪಘಾತ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.