KSRTC 4 ನಿಗಮಗಳ ನಷ್ಟ ಪರಿಹಾರಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ರಾಜ್ಯದ ನಾಲ್ಕು ಬಸ್ ನಿಗಮಗಳು ಶೇ.15ರಷ್ಟು ಪ್ರಯಾಣ ದರವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಈ ಕುರಿತು ಸರಕಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಾರಿಗೆ ನಿಗಮಗಳು ಆರು ತಿಂಗಳ ಹಿಂದೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಈವರೆಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಆರ್ಥಿಕ ಸಮಸ್ಯೆಯ ಹೊರೆಯನ್ನು ಹೆಚ್ಚಾಗಿ ಹೊರುವಂತಾಗಿದೆ. ಹೀಗಾಗಿ ಅಧಿಕಾರಿಗಳು ದರ ಪರಿಷ್ಕರಣೆ ಅಗತ್ಯವನ್ನು ಒತ್ತಿ ಹೇಳಿದ್ದು, ನಿಗಮಗಳಿಂದ ಉಂಟಾದ ನಷ್ಟವನ್ನು ಸಮತೋಲನ ಗೊಳಿಸುವುದು ಮೊದಲ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಶೇ.45ಕ್ಕಿಂತ ಹೆಚ್ಚು ಡೀಸೆಲ್‌ಗೆ ಖರ್ಚು: ಇಂಧನ, ಬಿಡಿ ಭಾಗಗಳು ಮತ್ತು ಟೈರ್‌ಗಳ ಬೆಲೆಗಳು ಹೆಚ್ಚಾಗಿದ್ದು, ಹೆಚ್ಚಿನ ಆದಾಯವು ನೌಕರರ ಸಂಬಳಕ್ಕೆ ಹೋಗುತ್ತದೆ. ಉತ್ಪಾದಿತ ಆದಾಯದ ಶೇ.45ಕ್ಕಿಂತ ಹೆಚ್ಚು ಡೀಸೆಲ್‌ಗೆ ಖರ್ಚು ಮಾಡಲಾಗುತ್ತಿದೆ.
ಇನ್ನು ಕೆಎಸ್‌ಆರ್‌ಟಿಸಿಯಲ್ಲಿ ಕಳೆದ ಬಾರಿ ಬಸ್ ದರ ಪರಿಷ್ಕರಣೆಯಾದಾಗ ಡೀಸೆಲ್ ದರ ಲೀಟರ್‌ಗೆ 61 ರೂ. ಇತ್ತು. ಆದರೆ ಡೀಸೆಲ್ ಬೆಲೆ ಈಗ ಲೀಟರ್‌ಗೆ 90 ರೂ. ಆಗಿದೆ. ಆದರೆ ಪ್ರಯಾಣ ದರಗಳು ಹಾಗೆಯೇ ಉಳಿದಿವೆ. 2020 ರಲ್ಲಿ ಬಸ್ ದರದ ಪರಿಷ್ಕರಣೆಯಾದಾಗ ಕೆಎಸ್‌ಆರ್‌ಟಿಸಿಯು ಮೂರು ಕೋಟಿ ರೂ. ಖರ್ಚು ಮಾಡುತ್ತಿತ್ತು.
ಆದರೆ ಇಂಧನ ಬೆಲೆಯ ಏರಿಕೆಯಿಂದಾಗಿ ನಿಗಮಗಳು ದಿನಕ್ಕೆ 5 ಕೋಟಿ ರೂ. ವ್ಯಯಿಸುತ್ತಿವೆ. ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚದಿಂದಾಗಿ ಅವರು ಪ್ರಯಾಣ ದರ ಏರಿಕೆಗೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.
ಇನ್ನು ನಾಲ್ಕು ನಿಗಮಗಳ ಹಣದ ಕೊರತೆ ನೀಗಿಸುವುದು ಸರ್ಕಾರದ ಕರ್ತವ್ಯವೂ ಕೂಡ ಆಗಿದೆ. ಹೀಗಾಗಿ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಬಾಕಿ ವೇತನ ಸಂಗ್ರಹವೂ ಆಗಬೇಕಿದೆ. ಇತ್ತ 2014ರಲ್ಲಿ ಬಿಎಂಟಿಸಿ ದರ ಪರಿಷ್ಕರಿಸಲಾಯಿತು. 2020ರಲ್ಲಿ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಯ ದರಗಳನ್ನು ಪರಿಷ್ಕರಿಸಲಾಯಿತು. ಅಂದಿನಿಂದ ಸರಕಾರವು ಯಾವುದೇ ರೀತಿಯ ದರವನ್ನು ಹೆಚ್ಚಿಸಿಲ್ಲ ಎಂದು ನಿಗಮವು ತಿಳಿಸಿದೆ.