ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗ ತುಮಕೂರು ಘಟಕ 1&2ರ ವ್ಯವಸ್ಥಾಪಕರು, ಕುಣಿಗಲ್, ತುರುವೇಕೆರೆ, ತಿಪಟೂರು, ಸಿರಾ, ಮಧುಗಿರಿ, ಘಟಕ ವ್ಯವಸ್ಥಾಪಕರು ಮಾರಣಾಂತಿಕ/ಗಂಭೀರ ಅಪಘಾತದಲ್ಲಿ ಭಾಗಿಯಾದ ಚಾಲನಾ ಸಿಬ್ಬಂದಿಗಳ ಚಾಲನಾ ಪರವಾನಗಿಯನ್ನು ಅಮಾನತು ಮಾಡಿದ್ದು ಪರಿಶೀಲಿಸಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಸೂಚನೆ ನೀಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಿಗಮದ ವಾಹನದ ಚಾಲಕರು ಮಾರಣಾಂತಿಕ/ ಗಂಭೀರ ಅಪಘಾತಗಳಲ್ಲಿ ಭಾಗಿಯಾದ ಸಂದರ್ಭದಲ್ಲಿ ಚಾಲಕರ ಚಾಲನಾ ಪರವಾನಗಿಯನ್ನು ಆರ್‌ಟಿಒ ಇಲಾಖೆಯಿಂದ ಅಮಾನತುಗೊಳಿಸಿದ್ದಲ್ಲಿ, ಅಂತಹ ಚಾಲಕರನ್ನು ಅನುಸೂಚಿ ಕರ್ತವ್ಯಕ್ಕೆ ನಿಯೋಜಿಸಲು ಸಾಧ್ಯವಾಗುವುದಿಲ್ಲ ಹಾಗೂ ಅನ್ಯ ಕರ್ತವ್ಯಕ್ಕೆ ನಿಯೋಜಿಸಲು ಅವಕಾಶವಿರುವುದಿಲ್ಲ.
ಮುಂದುವರೆದಂತೆ ಮಾರಣಾಂತಿಕ/ ಗಂಭೀರ ಅಪಘಾತಗಳಲ್ಲಿ ಭಾಗಿಯಾದ ಚಾಲಕರನ್ನು ನಿಗಮದ ನಿಯಮಾವಳಿಗಳನ್ವಯ ಅಮಾನತಿನಲ್ಲಿಟ್ಟು. 30 ದಿನಗಳ ನಂತರ ಅಮಾನತಿನಿಂದ ತೆರವುಗೊಳಿಸಲಾಗುವುದು.
ಒಂದು ವೇಳೆ ಈ ಚಾಲಕರ ಚಾಲನಾ ಪರವಾಗಿಯನ್ನು ಆರ್‌ಟಿಒ ಇಲಾಖೆಯಿಂದ ಅಮಾನತುಗೊಳಿಸಿದ್ದಲ್ಲಿ ಸಿಬ್ಬಂದಿಗಳ ವಿವರಗಳನ್ನು ಸಂಚಾರ ಶಾಖೆಗೆ ಕಳುಹಿಸುವುದು. ಅನಂತರ ಅಮಾನತಿನಿಂದ ತೆರವುಗೊಂಡು ಘಟಕ ನಿಯೋಜನೆಯಾದ ಮೇಲೆ ಖಡ್ಡಾಯವಾಗಿ ಚಾಲಕರುಗಳ ಚಾಲನಾ ಪರವಾನಗಿಯನ್ನು ಪರಿಶೀಲಿಸಿ ಕರ್ತವ್ಯಕ್ಕೆ ನಿಯೋಜಿಸಬೇಕು.
ಚಾಲನಾ ಪರವಾನಗಿ ಇಲ್ಲದೇ ಇರುವ ಚಾಲಕರುಗಳನ್ನು ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ. ತಪ್ಪಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಲ್ಲ ಘಟಕ ವ್ಯವಸ್ಥಾಪಕರು, ವಿಭಾಗದ ಎಲ್ಲ ಘಟಕಗಳ ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.