KSRTC ಬಸ್ ಲಾರಿಗೆ ಡಿಕ್ಕಿ: ಸಂಸ್ಥೆಯ ಚಾಲಕ ಸಾವು, ಕಂಡಕ್ಟರ್ ಕಾಲು ಮುರಿತ, 10 ಮಂದಿ ಪ್ರಯಾಣಿಕರಿಗೆ ಗಾಯ: 18 ಗಂಟೆಗಳ ನಿರಂತರ ಡ್ಯೂಟಿಯೇ ದುರಂತಕ್ಕೆ ಕಾರಣ!
ಕೋಲಾರದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ದಬ್ಬಾಳಿಕೆಗೆ ಜೀವ ತೆತ್ತ ಚಾಲಕ, ಕೇಳುವವರು ಹೇಳುವವರೇ ಇಲ್ಲದಂತಾದ ಸಂಸ್ಥೆಯ ವಿಭಾಗದಲ್ಲಿ ಇರುವ ಅಧಿಕಾರಿಗಳ ದೌರ್ಜನ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಕಡಿವಾಣ ಹಾಕುವ ನಿಟ್ಟಿನಲ್ಲಿ ಎಂಡಿ ಹಾಗೂ ಸಾರಿಗೆ ಸಚಿವರೇ ಇತ್ತ ಒಮ್ಮೆ ನೋಡಿ ನೌಕರರ ಜೀವ ಉಳಿಸುವ ಕೆಲಸವನ್ನು ಇನ್ನಾದರೂ ಮಾಡಿ.

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೋಲಾರ ವಿಭಾಗದ ಅಧಿಕಾರಿಗಳ ಅಮಾನವೀಯ ಶೋಷಣೆ ಮತ್ತು ನಿಯಮಬಾಹಿರ ದೌರ್ಜನ್ಯಕ್ಕೆ ಮತ್ತೊಬ್ಬ ಕೆಎಸ್‌ಆರ್‌ಟಿಸಿ ಚಾಲಕ ಜೀವ ತೆತ್ತಿರುವ ಘಟನೆ ರಾತ್ರಿ 11.45ರ ಸಮಯದಲ್ಲಿ ನಡೆದಿದೆ.
ಕೋಲಾರ ವಿಭಾಗದ ಅಧಿಕಾರಿಗಳು ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ನೀಡದೆ, ಸತತ 18 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿರುವುದರ ಪರಿಣಾಮ ರಾತ್ರಿ ಬೂದಿಗೆರೆ ಕ್ರಾಸ್ ಬಳಿ ನಡೆದ ಸಾರಿಗೆ ಬಸ್ ಹಾಗೂ ಲಾರಿ ನಡುವಿನ ಭೀಕರ ಅಪಘಾತಕ್ಕೆ ಸಂಸ್ಥೆಯ ಚಾಲಕ ಸುರೇಶ್ (48) ಎಂಬುವರು ಮೃತಪಟ್ಟಿದ್ದಾರೆ. ಇನ್ನು ಕಂಡಕ್ಟರ್ ಮಂಜುನಾಥ್ ಎಂಬುವರ ಕಾಲು ಮುರಿದಿದೆ ಮತ್ತು 10 ಜನ ಪ್ರಯಾಣಿಕರಿಗೆ ಗಾಯವಾಗಿದ್ದು ಎಲ್ಲರರನ್ನು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇದಕ್ಕೆಲ್ಲ ನೇರ ಕಾರಣ ಈ ಅಧಿಕಾರಿಗಳೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದ್ದು, ಸುಮಾರು 2019ರಿಂದಲೂ ಈ ದೌರ್ಜುವನ್ನು ತಡೆಯುವಲ್ಲಿ ಯಾವುದೇ ಎಂಡಿ ಮನಸ್ಸು ಮಾಡಿಲ್ಲ. ಈ ಪರಿಣಾಮ ವಿಭಾಗದ ಎಲ್ಲ ಘಟಕಗಳ ನೌಕರರು ಭಾರಿ ಒತ್ತಡದಲ್ಲೇ ಜೀವ ಕೈಯಲ್ಲಿ ಹಿಡಿದುಕೊಂಡು ಡ್ಯೂಟಿ ಮಾಡುತ್ತಿದ್ದಾರೆ.
ಭೀಕರ ಅಪಘಾತ-ಸ್ಥಳದಲ್ಲೇ ಚಾಲಕ ಸಾವು: ಗುರುವಾರ ರಾತ್ರಿ ಸುಮಾರು 11:45ರ ಸಮಯದಲ್ಲಿ ಬೂದಿಗೆರೆ ಕ್ರಾಸ್ ಮೇಲ್ಸೇತುವೆ ಮೇಲೆ ಹಿಂದಿನಿಂದ ಸಾರಿಗೆ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಚಾಲಕ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಲಾರ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ (ಮಾರ್ಗ ಸಂಖ್ಯೆ: 105AB, ವಾಹನ ಸಂಖ್ಯೆ: KA07F1912) ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದೆ.
ನಿರ್ವಾಹಕ ಮಂಜುನಾಥ್ ಅವರ ಕಾಲು ಮುರಿದಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರ ಪರಿಸ್ಥಿತಿ ಗಂಭೀರವಾಗಿದೆ. ಬಸ್ಸಿನಲ್ಲಿದ್ದ ಸುಮಾರು 10 ಪ್ರಯಾಣಿಕರಿಗೂ ತೀವ್ರ ಗಾಯಗಳಾಗಿವೆ.
ಏನಿದು ‘ಕಿಲ್ಲಿಂಗ್’ ಟೈಮ್ ಟೇಬಲ್?: ಮೇಲ್ನೋಟಕ್ಕೆ ಇದು ಕೇವಲ ರಸ್ತೆ ಅಪಘಾತದಂತೆ ಕಂಡರೂ, ಇದರ ಹಿಂದೆ ಅಧಿಕಾರಿಗಳು ಸೃಷ್ಟಿಸಿರುವ ಭೀಕರ ಡ್ಯೂಟಿ ರೋಸ್ಟರ್ ಅಡಗಿದೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಸ್ ಕೋಲಾರದಿಂದ ಹೊರಟು 7 ಗಂಟೆಗೆ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಕೇವಲ 22 ನಿಮಿಷಗಳಲ್ಲೇ ಅಂದರೆ ಬೆಳಗ್ಗೆ 7:22ಕ್ಕೆ ಬೆಂಗಳೂರಿನಿಂದ ಕೋಲಾರ, ಮುಳಬಾಗಿಲು, ಪಲಮನೇರು, ಚಿತ್ತೂರು ಮಾರ್ಗವಾಗಿ ತಿರುಪತಿಗೆ ಹೊರಡುತ್ತದೆ.
ಬಳಿಕ ತಿರುಪತಿಯನ್ನು ಮಧ್ಯಾಹ್ನ 2:30ಕ್ಕೆ ತಲುಪುತ್ತದೆ. ಮತ್ತೆ ಅಲ್ಲಿಂದ ಮಧ್ಯಾಹ್ನ 3:45ಕ್ಕೆ ಅಂದರೆ ಕೇವಲ ಒಂದೂವರೆ ಗಂಟೆಯ ಬಿಡುವಿನಲ್ಲಿ ಮತ್ತೆ ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಪ್ರಯಾಣ. ( ಇಲ್ಲಿ ಬೆಳಗ್ಗೆ 5ರಿಂದ ಮಧ್ಯಾಹ್ನ 1ಗಂಟೆಗೆ ಚಾಲಕನ ಡ್ಯೂಟಿ 8ಗಂಟೆ ಪೂರ್ಣಗೊಂಡು ಮುಗಿಯುತ್ತದೆ) ಆದರೆ, ಅದೇ ಚಾಲಕ ಮಧ್ಯಾಹ್ನ 3:45ಕ್ಕೆ ತಿರುಪತಿಯಿಂದ ಬೆಂಗಳೂರಿಗೆ ಹೊರಡುತ್ತಾನೆ. ಆ ಬಸ್ ರಾತ್ರಿ 11ಗಂಟೆಗೆ ಬೆಂಗಳೂರು ತಲುಪಿದ ನಂತರ, ಅಲ್ಲಿಂದ ಮತ್ತೆ ಕೋಲಾರಕ್ಕೆ ಬಸ್ ಚಲಾಯಿಸಿಕೊಂಡು ಬರಬೇಕು.
ಇದು ನಿತ್ಯ ಸಂಸ್ಥೆಯ ನಿಯಮಕ್ಕೆ ವಿರುದ್ಧವಾಗಿ ನಡೆಯುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಮೌಖಿಕ ಆದೇಶ ಮಾಡುತ್ತಿದ್ದಾರೆ. ಒಂದು ವೇಳೆ ಈ ನೀಚರ ಮೌಖಿಕ ಆದೇಶವನ್ನು ಪಾಲಿಸದೆ ಹೋದರೆ ಅಂತ ನೌಕರರಿಗೆ ಇನ್ನಿಲ್ಲದಂತಹ ಕಿರುಕುಳನ್ನು ನೀಡುತ್ತಾರೆ ಮಾನವೀಯತೆಯೇ ಇಲ್ಲದೆ ದುರ್ಬುದ್ಧಿಯ ಈ ಅಧಿಕಾರಿಗಳು.
ನಿಯಮ ಉಲ್ಲಂಘಿಸಿ ಅಧಿಕಾರಿಗಳ ದೌರ್ಜನ್ಯ: ಅಧಿಕೃತ ನಿಯಮ ಫಾರಂ-4 ಪ್ರಕಾರ, ಕೋಲಾರದಿಂದ ಬೆಂಗಳೂರು ಮಾರ್ಗವಾಗಿ ತಿರುಪತಿ ತಲುಪಿದ ತಕ್ಷಣ ಅಲ್ಲಿ ಸಿಬ್ಬಂದಿ ಬದಲಾವಣೆ (ಸ್ಕ್ರೋವ್ ಚೆಂಜ್) ಮಾಡಬೇಕಿತ್ತು. ಅಲ್ಲಿಗೆ ಹೋದ ಚಾಲಕ ಹಾಗೂ ನಿರ್ವಾಹಕರಿಗೆ ಕಡ್ಡಾಯ ವಿಶ್ರಾಂತಿ ನೀಡಬೇಕಿತ್ತು. ಆದರೆ, ಅಧಿಕಾರಿಗಳು ಯಾವುದೇ ಬದಲಿ ಸಿಬ್ಬಂದಿಯನ್ನು ನಿಯೋಜಿಸದೆ, ಅದೇ ಚಾಲಕನನ್ನು ಸತತ 17 ರಿಂದ 18 ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ದುಡಿಸಿದ್ದಾರೆ. ತೀವ್ರ ಆಯಾಸ ಮತ್ತು ನಿದ್ದೆಯ ಮಂಪರಿನಲ್ಲಿ ಸ್ಟೀರಿಂಗ್ ಹಿಡಿದಿದ್ದ ಚಾಲಕ ಸುರೇಶ್ ಕೊನೆಗೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಹೊಣೆ ಯಾರು? ನೌಕರರ ಆಕ್ರೋಶ: ನೌಕರರ ಜೀವನದ ಜತೆ ಈ ರೀತಿ ಚೆಲ್ಲಾಟವಾಡುತ್ತಿರುವ ಕೋಲಾರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು (DC), ವಿಭಾಗೀಯ ಸಂಚಲನಾಧಿಕಾರಿಗಳು (DTO) ಹಾಗೂ ಘಟಕ ವ್ಯವಸ್ಥಾಪಕರು (DM) ಈ ಸಾವಿಗೆ ನೇರ ಹೊಣೆಯಾಗುತ್ತಾರೆ. ಇಷ್ಟೆಲ್ಲ ಅನಾಹುತ ನಡೆದರೂ ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಯೇ ವಿನಃ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
“ಇನ್ನೂ ಎಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳಲು ಈ ಅಧಿಕಾರುಗಳು ಸಂಸ್ಥೆ ಕಾಯುತ್ತಿದ್ದಾರೋ? ಈಗ ಅನಾಥವಾಗಿರುವ ಚಾಲಕನ ಕುಟುಂಬಕ್ಕೆ ಯಾರು ಹೊಣೆ?” ಎಂದು ಸಾರಿಗೆ ನೌಕರರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೌಕರರು ಒತ್ತಾಯಿಸಿದ್ದಾರೆ.
ಬೇಜವಾಬ್ದಾರಿಯಿಂದ ವರ್ತಿಸುವ ಕೋಲಾರ ವಿಭಾಗದ ಡಿಟಿಒ: ಇಲ್ಲಿನ ವಿಭಾಗೀಯ ಸಂಚಲನಾಧಿಕಾರಿ ಅವರ ಬೇಜವಾಬ್ದಾರಿತನ ಹಾಗೂ ಉದಾಸೀನತೆಯ ವರ್ತನೆ ಸಾರಿಗೆ ನೌಕರರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಮರ್ಪಕವಾಗಿ ಪರಿಶೀಲಿಸದೆ, ಅವೈಜ್ಞಾನಿಕವಾಗಿ ‘ಫಾರಂ-4’ (Form-4) ವೇಳಾಪಟ್ಟಿಗಳನ್ನು ಸಿದ್ಧಪಡಿಸುವುದು. ಬಳಿಕ ಚಾಲಕರು ಮತ್ತು ನಿರ್ವಾಹಕರ ಮೇಲೆ ತೀವ್ರ ಒತ್ತಡವನ್ನು ಹೇರುತ್ತಿದ್ದಾರೆ.
ಇನ್ನು ಈ ಕುರಿತು ನೌಕರರು ಪ್ರಶ್ನಿಸಿದರೆ, “ಫಾರಂ-4 ಮಾಡುವುದಷ್ಟೇ ನನ್ನ ಕೆಲಸ, ಅದನ್ನು ಜಾರಿಗೆ ತರುವುದು ಡಿಪೋ ಮ್ಯಾನೇಜರ್‌ಗಳು, ಎಟಿಎಸ್, ಟಿಸಿ ಮತ್ತು ಎಟಿಐಗಳ ಜವಾಬ್ದಾರಿ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ಡಿಟಿಒ ಮಂಜುನಾಥ್ ಅವರು ಹಾರಿಕೆ ಉತ್ತರ ನೀಡುತ್ತಿರುವುದು ವಿಭಾಗದೊಳಗಿನ ಸಮನ್ವಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ.
ಅಲ್ಲದೆ ಹೀಗೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದರಿಂದ ಮತ್ತು ಅವಾಸ್ತವಿಕ ಫಾರಂ-4 ಸಿದ್ಧಪಡಿಸಿ ಅದನ್ನು ಚಾಲಕರ ಮೇಲೆ ಹೇರುತ್ತಿರುವುದರಿಂದ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ವಿಶ್ರಾಂತಿಯಿಲ್ಲದ ಕೆಲಸ, ಅತಿಯಾದ ಒತ್ತಡದಿಂದಾಗಿ ಇಂದು ನೌಕರರೊಬ್ಬರು ಜೀವ ಕಳೆದುಕೊಳ್ಳುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಉನ್ನತ ಅಧಿಕಾರಿಯ ಈ ಉದಾಸೀನ ಧೋರಣೆಯೇ ಇಂತಹ ದುರಂತಕ್ಕೆ ಪರೋಕ್ಷ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.
ಇನ್ನು ಸ್ಥಳೀಯ ಡಿಪೋ ಅಧಿಕಾರಿಗಳು ಮತ್ತು ಮಾರ್ಗ ಉಸ್ತುವಾರಿಗಳ ಮೇಲೆ ನೆಪ ಹಾಕಿ ನುಣುಚಿಕೊಳ್ಳುವ ಡಿಟಿಒ ಅವರ ಈ ನಡವಳಿಕೆಯು ಸಿಬ್ಬಂದಿಗಳ ಸುರಕ್ಷತೆಯನ್ನು ಗಾಳಿಗೆ ತೂರಿದೆ. ಕೆಎಸ್‌ಆರ್‌ಟಿಸಿ ಉನ್ನತ ಅಧಿಕಾರಿಗಳು ತಕ್ಷಣವೇ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಕಿದೆ. ಅವೈಜ್ಞಾನಿಕ ಫಾರಂ-4 ವೇಳಾಪಟ್ಟಿಯನ್ನು ಸರಿಪಡಿಸಿ, ನೌಕರರ ಜೀವದ ಜತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನೌಕರರು ಒತ್ತಾಯಿಸುತ್ತಿದ್ದಾರೆ.







