ಹಾಸನ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಬ್ರೇಕ್ ಫೇಲ್ ಆಗಿ ಶಾಲೆಯೊಂದಕ್ಕೆ ನುಗ್ಗಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ಬಾಗೆ ಬಳಿ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವಾಗ ಮಾರ್ಗಮಧ್ಯೆ ಬ್ರೇಕ್ ಫೇಲ್ ಆಗಿದೆ. ಹೀಗಾಗಿ ಬಾಗೆ ಬಳಿ ಇರುವ ಜೆಎಸ್ಎಸ್ ಶಾಲೆಗೆ ಬಸ್ ನುಗ್ಗಿಕೊಂಡು ಹಾಗೇ ಮುಂದೆ ಹೋಗಿದೆ. ಪರಿಣಾಮ ಬಸ್‌ನ ಮುಂಭಾಗದ ಕಿಟಕಿ ಬಳಿ ಕುಳಿತ್ತಿದ್ದ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಗ್ರಾಮದ ನಿವಾಸಿ ಅಮೃತ್ ರಾಜ್ (34) ಅಸುನೀಗಿದ್ದಾರೆ.
ಅಷ್ಟೇ ಅಲ್ಲದೆ ಈ ಅಪಘಾತದಿಂದ 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅವಶ್ಯವಿರುವವರನ್ನು ದೊಡ್ಡಾಸ್ಪತ್ರೆಗೆ ಕಳುಹಿಸಲಾಗಿದೆ.
ಇಂದು ಭಾನುವಾರವಾಗಿದ್ದರಿಂದ ಶಾಲೆಗೆ ರಜೆ ಇತ್ತು. ಹೀಗಾಗಿ ಮಕ್ಕಳು ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಇನ್ನು ಶಾಲೆಯ ಕಟ್ಟಡವು ಹಾನಿಗೊಳಗಾಗಿದೆ.
ಈ ಅವಘಢ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.