ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮತ್ತು ಅಧಿಕಾರಿಗಳ 2022- 23 ನೇ ಸಾಲಿನ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯ ನಿಧಿ ಚೀಟಿಯನ್ನು ಆನ್ಲೈನ್ ಮೂಲಕ ವೀಕ್ಷಿಸುವ ಸೌಲಭ್ಯವನ್ನು ಬಿಡುಗಡೆ ಮಾಡಬೇಕು ಎಂದು ಭವಿಷ್ಯ ನಿಧಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಬುಧವಾರ ಆದೇಶ ಹೊರಡಿಸಿದ್ದು, 2022-23 ನೇ ಸಾಲಿನ ಭವಿಷ್ಯ ನಿಧಿ / ಐಚ್ಛಿಕ ಭವಿಷ್ಯ ನಿಧಿ ಚೀಟಿಯನ್ನು ನಿಗಮದ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ನೌಕರರು ಮತ್ತು ಅಧಿಕಾರಿಗಳು ವೀಕ್ಷಿಸುವ ಮತ್ತು ಮುದ್ರಿಸಿಕೊಳ್ಳುವ ಸೌಲಭ್ಯವನ್ನು ಒದಗಿಸಲು ಸೂಕ್ತಾಧಿಕಾರಿಗಳು ಅನುಮೋದನೆ ನೀಡಿದ್ದಾರೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ಇನ್ನು 25-10-2023 ರಂದು pf.ksrtc.org ವೆಬ್ಸೈಟ್ನಲ್ಲಿ ನೌಕರರು ಲಾಗಿನ್ ಆಗಿ 2022-23 ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಛಿಕ ನಿಧಿ ಚೀಟಿಗಳ ವೀಕ್ಷಣೆಯ ಜತೆಗೆ ಮುದ್ರಣ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸುವಂತೆ ಹಾಗೂ ಆನ್ಲೈನ್ ವೀಕ್ಷಣೆ ವ್ಯವಸ್ಥೆಯಲ್ಲಿ ಉದ್ಭವಿಸುವ ಯಾವುದೇ ತಾಂತ್ರಿಕ ಅಡಚಣೆಗಳನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ಈ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಈ ಸಂಬಂಧ ಆಯಾ ವಿಭಾಗೀಯ ಕಚೇರಿಗಳಲ್ಲಿ, ಘಟಕಗಳಲ್ಲಿ, ಕಾರ್ಯಾಗಾರಗಳಲ್ಲಿ ಮತ್ತು ತರಬೇತಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ತಲುಪುವಂತೆ ಸೂಚನಾ ಫಲಕಗಳ ಮೂಲಕ ಮಾಹಿತಿ ಒದಗಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ನಿಗಮದ ಬೆಂಗಳೂರು ಕೇಂದ್ರ ವಿಭಾಗ ಸೇರಿದಂತೆ ರಾಮನಗರ, ಮೈಸೂರು, ಕೋಲಾರ, ಮಂಗಳೂರು, ಹಾಸನ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಕೆಂಪೇಗೌಡ ಬಸ್ ನಿಲ್ದಾಣ, ಮಂಡ್ಯ, ಚಿಕ್ಕಬಳ್ಳಾಪುರ, ಚಾಮರಾಜನಗರ, ಪುತ್ತೂರು, ಶಿವಮೊಗ್ಗ, ಚಿತ್ರದುರ್ಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ನಿರ್ವಾಹಕ ಅಭಿಯಂತರರು, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರದ ಅಧಿಕಾರಿಗಳಿಗೂ ಈ ಮಾಹಿತಿ ನೀಡಿ ಆದೇಶ ಹೊರಡಿಸಿದ್ದಾರೆ.