ಬೆಳಗಾವಿ: ಸುವರ್ಣ ಸೌಧದ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹತ್ತಿಕ್ಕಲು ಸರ್ಕಾರ ಸುಮಾರು 300 ಜನ ಪೊಲೀಸರನ್ನು ಬಿಟ್ಟಿದೆ.
ಈ ಮೂಲಕ ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಬದಲಿಗೆ ಅವರನ್ನು ಉಪವಾಸ ಸತ್ಯಾಗ್ರಹ ನಿರತ ಸ್ಥಳದಿಂದ ಬಲವಂತವಾಗಿ ಎಬ್ಬಿಸಲು ಹೊರಟಿದೆ. ಆದರೆ ನೌಕರರು ಅದಕ್ಕೆ ಒಪ್ಪುತ್ತಿಲ್ಲ.
ಇನ್ನು ನೀವು ಒಪ್ಪದಿದ್ದರೆ ನಾವು ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಪೊಲೀಸರು ಸತ್ಯಾಗ್ರಹ ನಿರತರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಅರ್ಧಗಂಟೆಯಿಂದ ಸತ್ಯಾಗ್ರಹ ನಿರತರನ್ನು ಸುತ್ತುವರಿದಿರುವ ನೂರಾರು ಪೊಲೀಸರು ಸತ್ಯಾಗ್ರಹ ನಿರತರನ್ನು ಬಂಧಿಸಲು ಮುಂದಾಗುತ್ತಿದ್ದಾರೆ.
ಆದರೆ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಉಪವಾಸ ನಿರತ ನೌಕರರ ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಿಮ್ಮ ಕರ್ತವ್ಯಕ್ಕೆ ಅಡ್ಡಿ ಬರುವುದಿಲ್ಲ ಹೀಗಾಗಿ ನೀವು ನಮ್ಮನ್ನು ಏನು ಮಾಡುತ್ತೀರೋ ಮಾಡಿ ಎಂದು ಪೊಲೀಸರಿಗೆ ತಿಳಿಸಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದಾರೆ.
ಹೀಗಾಗಿ ಪೊಲೀಸರು ಇನ್ನು ಏನು ಕ್ರಮ ಜರುಗಿಸಬೇಕು ಎಂದು ತೋಚದೆ ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.