ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಯನ್ನು ಯಾವುದೋ ಕೀಳು ಕೋಕದಿಂದ ಬಂದವರಂತೆ ಕೆಲ ಘಟಕ ಮಟ್ಟದ ಅಧಿಕಾರಿಗಳು ನಡೆಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳಾ ಸಿಬ್ಬಂದಿಯನ್ನು ಕಾಲ್‌ಕಸಕ್ಕಿಂತಾ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ.
ಹೌದು! ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಹಿಳಾ ಕಂಡಕ್ಟರ್‌ಗಳಿಗೆ ಹಗಲು ರಾತ್ರಿ ಡ್ಯೂಟಿ ಮಾಡುವಂತೆ ಇನ್ನಿಲ್ಲ ಟಾರ್ಚರ್ ಕೊಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದು ಈ ಬಗ್ಗೆ ಮಹಿಳಾ ಕಂಡಕ್ಟರ್‌ಗಳು ಸಾರಿಗೆ ಸಚಿವರ ಮೊರೆ ಹೋಗಿದ್ದಾರೆ.
ಬೆಂಗಳೂರಿನ ದೀಪಾಂಜಲಿ ನಗರದಲ್ಲಿರುವ KSRTC ಘಟಕ- 5ರ ಕಂಡಕ್ಟರ್ ನಂಜಮ್ಮ ಎಂಬುವರು ಅಧಿಕಾರಿಗಳ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ. ಋತುಚಕ್ರದ ಸಮಸ್ಯೆ ಇದ್ದರೂ ಡ್ಯೂಟಿ ಮಾಡಿ ಎಂದು ಟಾರ್ಚರ್ ಕೊಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಧಿಕಾರಿಗಳ ಈ ಕಿರುಕುಳದ ಬಗ್ಗೆ ಸಿಟಿಎಂ ಅಂತೋಣಿ ಜಾರ್ಜ್ ಅವರ ಗಮನಕ್ಕೆ ತಂದೆವು. ಅವರು ಈ ಬಗ್ಗೆ ವಿಚಾರಿಸುವುದನ್ನು ಬಿಟ್ಟು ನಮಗೆ ದರ್ಪದ ಮಾತುಗಳನ್ನು ಆಡಿ ಅವಾಚ್ಯವಾಗಿ ನಿಂದಿಸಿದ್ದರು. ಅದನ್ನು ಈಗಲೂ ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆಯೂ ಅಧಿಕಾರಿಗಳ ಕಿರುಕುಳದ ಬಗ್ಗೆ ಮುಂಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದೇವೆ, ಆದರೆ ಅವರು ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಮಗಾದ ನೋವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಸದ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಿಎಂ ಅವರಿಗೆ ಲಿಖಿತವಾಗಿ ದೂರು ನೀಡಿದ್ದು ನಮ್ಮ ದೂರಿಗೆ ಸ್ಪಂದಿಸಿ ಅಧಿಕಾರಿಗಳ ಕಿರುಕುಳದಿಂದ ತಪ್ಪಿಸಲಬೇಕು ಎಂದು ಮನವಿ ಮಾಡಿದ್ದಾರೆ.
ನೋಡಿ ಘಟಕ ವ್ಯವಸ್ಥಾಪಕ ಡ್ಯೂಟಿಗೆ ಬಂದ ಕೂಡಲೇ ಅವರಿಗೆ ಸಂಬಂಧಿಸಿದ ರೂಟ್‌ಗೆ ಕಳುಹಿಸುವ ಬದಲಿಗೆ ಅನಗತ್ಯವಾಗಿ ಡಿಪೋದಲ್ಲೇ ಕಾಯಿಸಿ ಬಳಿಕ ತಡವಾಗಿ ಡ್ಯೂಟಿಗೆ ಹಾಕುತ್ತಾರೆ. ಬೇಗ ಬಂದರೂ ಡ್ಯೂಟಿ ಕೊಡದೆ ಸುಮ್ಮನೇ ಕೂರಿಸಿರುತ್ತಾರೆ. ಬಳಿಕ ತಡವಾಗಿ ಡ್ಯೂಟಿ ಕೊಟ್ಟು ಎಷ್ಟು ತಡವಾದರೂ ಡ್ಯೂಟಿ ಮುಗಿಸಿ ಮನೆಗೆ ಹೋಗಬೇಕು ಎಂದು ಹೇಳುತ್ತಾರೆ.
ಘಟಕ ವ್ಯವಸ್ಥಾಪಕರ ಈ ವರ್ತನೆಯಿಂದ ನಾವು ಈಗಾಗಲೇ ಅರ್ಧ ಸತ್ತುಹೋಗಿದ್ದೇವೆ. ಇವರಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ ನಮಗೆ ನೆಮ್ಮದಿಯಿಂದ ಕರ್ತವ್ಯ ಮಾಡುವುದಕ್ಕೆ ಅನುವು ಮಾಡಿಕೊಡಬೇಕು ಎಂದು ಮಾನಸಿಕವಾಗಿ ನೊಂದ 40ಕ್ಕೂ ಹೆಚ್ಚುಮಹಿಳಾ ಕಂಡಕ್ಟರ್‌ಗಳು ಸಹಿ ಮಾಡಿದ್ದಾರೆ.
ಇನ್ನು ಈ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ 44 ಮಂದಿ ಸಿಬ್ಬಂದಿ ಸಹಿ ಮಾಡಿರುವ ಪತ್ರದೊಂದಿಗೆ ಲಿಖಿತವಾಗಿ ದೂರು ನೀಡಿದ್ದೇವೆ ಎಂದು ಮಂಜಮ್ಮ ತಿಳಿಸಿದ್ದಾರೆ.