ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ಬಿಎಂಟಿಸಿ & ಕೆಎಸ್ಆರ್ಟಿಸಿ ವತಿಯಿಂದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನಾ ಸಭೆ ಹಾಗೂ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಏಪ್ರಿಲ್ 29 ರಂದು ಬೆಳಗ್ಗೆ 11 ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದ ಭವಿಷ್ಯಕ್ಕೆ ಮಹತ್ವದ ಚುನಾವಣೆ ಇದಾಗಿದ್ದು, ಯುವಕರು ವೃದ್ಧರೆನ್ನದೆ ರಣೋತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಮತಪೆಟ್ಟಿಗೆಯಲ್ಲಿ ಭದ್ರ ಪಡಿಸಿದ್ದು, ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ.
ವಿಪರ್ಯಾಸವೆಂದರೆ, ಇಪಿಎಸ್ ನಿವೃತ್ತರ ಬೇಡಿಕೆಗಳ ಬಗ್ಗೆ ಆಳುವ ಅಥವಾ ವಿಪಕ್ಷದವರು ತಮ್ಮ ಪ್ರಣಾಳಿಕೆಯಲ್ಲಿ ಯಾವೊಂದು ಅಂಶಗಳನ್ನು ಉಲ್ಲೇಖಿಸದೆ, ತಮ್ಮ ಗೆಲುವಿನ ತಂತ್ರಗಳನ್ನು ರೂಪಿಸಿ ಕೊಂಡು, ಪ್ರಚಾರದ ಭರಾಟೆ ನೋಡಿದರೆ ಶ್ರೀಸಾಮಾನ್ಯ ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಇಪಿಎಫ್ಒ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ, ಏಪ್ರಿಲ್ 29ರಂದು “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮವನ್ನು ದೇಶಾದ್ಯಂತ ಇರುವ ಎಲ್ಲ ಪಿಎಫ್ ಕಚೇರಿ ಆವರಣದಲ್ಲಿ ನಡೆಸುತ್ತಿದ್ದು, ನಿವೃತ್ತರ ಎಲ್ಲ ಕುಂದುಕೊರತೆಗಳನ್ನು ಬಗೆಹರಿಸುತ್ತೇವೆ ಎಂದು ಪ್ರಚೂರಾಪಡಿಸಿದ್ದಾರೆ. ಆದರೆ, ಇದುವರೆಗೂ ನಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಚುನಾವಣಾ ಹೊತ್ತಿನಲ್ಲಿ ನಾವು ಹಮ್ಮಿಕೊಂಡಿರುವ ಈ ಪ್ರತಿಭಟನೆ ದೇಶಾದ್ಯಂತ ಮಾರ್ಧನಿಸಬೇಕು ಎಂದು ತಿಳಿಸಿದ್ದಾರೆ.
ನಾವು ಅಧಿಕಾರಿಗಳಿಗೆ ನೀಡಿರುವ ಮನವಿ ಪತ್ರಗಳಿಗೆ ಅವರಿಂದ ಯಾವುದೇ ಸ್ಪಂದನೆ ಇಲ್ಲ. ಹೀಗಾಗಿ ಎಲ್ಲ ಇಪಿಎಸ್ ನಿವೃತ್ತರು ಎಚ್ಚೆತ್ತುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.
ಇನ್ನು ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಹಾಗೂ ಇತರೆ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ನಮ್ಮ ಮುಂದಿನ ಹೋರಾಟದ ರೂಪುರೇಷೆಯನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ಸುನಿಲ್ ಕುಮಾರ್ ಪ್ರಕರಣದಲ್ಲಿ ತೀರ್ಪು ನೀಡಿ, ಒಂದೂವರೆ ವರ್ಷ ಕಳೆದರೂ ಈವರೆಗೂ ಯಾವುದೇ ಪ್ರಗತಿಯಾಗಿಲ್ಲ. ಕನಿಷ್ಠ ಪಿಂಚಣಿ ಹಾಗೂ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಸಂಗತಿಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.