- ದೇಶದ ಯಾವುದೇ ಸಂಸ್ಥೆಯಲ್ಲೂ ಈ ಮಾದರಿಯ ಕೋಟಿ ರೂ. ವಿಮಾ ಮೊತ್ತ ಪಾವತಿಸುವ ಯೋಜನೆ ಜಾರಿಯಾಗಿಲ್ಲ: ಡಾ.ಸಿ.ಎನ್ ಮಂಜುನಾಥ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆಯಲ್ಲಿದ್ದ ಇಬ್ಬರು ನೌಕರರು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಅವರ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆ ಅಡಿಯಲ್ಲಿ ಒಂದು ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಇಂದು ವಿತರಿಸಲಾಯಿತು.
ಗುರವಾರ (ನ.2) ನಿಮಗದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಮಸ್ತ ಸಿಬ್ಬಂದಿಗಳಿಗೆ ಹತ್ತು ಮಾದರಿಯ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆ ಮಾಡಿಸಲು ಐದು ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯವರೊಂದಿಗೆ ನಿಗಮದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಚೆಕ್ ವಿತರಿಸಲಾಯಿತು.
ಈ ವೇಳೆ ಕಾರ್ಯಕ್ರಮದಲ್ಲೇ ಇದ್ದ ಡಾ.ಸಿ.ಎನ್ ಮಂಜುನಾಥ್ ಅವರು, ಈ ವಿಶೇಷ ವಿಮಾ ಯೋಜನೆಯ ಬಗ್ಗೆ ಅತೀವ ಸಂತೋಷ ವ್ಯಕ್ತಪಡಿಸಿ, ದೇಶದ ಯಾವುದೇ ಸಂಸ್ಥೆಗಳಲ್ಲಿ ಈ ಮಾದರಿಯ ಒಂದು ಕೋಟಿ ರೂ. ವಿಮಾ ಮೊತ್ತ ಪಾವತಿಸುವ On road/ Off road accident ಯೋಜನೆ ಜಾರಿಯಾಗಿಲ್ಲ ಎಂದು ಸಾರಿಗೆ ಸಂಸ್ಥೆಗಳಲ್ಲಿ ಆಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಕೆಎಸ್ಆರ್ಟಿಸಿಯು ಸಿಬ್ಬಂದಿಗಳ ಬಗ್ಗೆ ಜಾರಿಗೊಳಿಸುತ್ತಿರುವ ಹಲವು ಕಾರ್ಯಕ್ರಮಗಳನ್ನು ನಾನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ನಿಗಮವು ಎರಡು ಮೂರು ದಿನಗಳ ಹಿಂದೆಯಷ್ಟೇ ರೂ 10 ಲಕ್ಷಕ್ಕೆ ಏರಿಕೆ ಮಾಡಿದ ಕುಟುಂಬ ಕಲ್ಯಾಣ ಪರಿಹಾರ ಯೋಜನೆಯೂ ಸೇರಿದಂತೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಬಹಳ ಒಳ್ಳೆಯ ಕಾರ್ಯಗಳು ನಡೆಯುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ಪುತ್ತೂರು ವಿಭಾಗ ಧರ್ಮಸ್ಥಳ ಘಟಕದ ಸಹಾಯಕ ಸಂಚಾರ ನಿರೀಕ್ಷಕ ಮಂಜುನಾಥ ಟಿ. ಅವರು 17.3.2023ರಂದು ದ್ವಿಚಕ್ರದ ವಾಹನದಲ್ಲಿ ಹೋಗುವಾಗ ವಾಹನದಿಂದ ಬಿದ್ದು ಮೃತಪಟ್ಟಿದ್ದರು. ಅವರು ನಿಗಮದಲ್ಲಿ 34 ವರ್ಷಗಳ ಸೇವೆ ಸಲ್ಲಿಸಿದ್ದು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಬೆಂಗಳೂರು ಕೇಂದ್ರ ವಿಭಾಗ ಘಟಕ- 5ರ ಚಾಲಕ ಕಂ ನಿರ್ವಾಹಕ ಶ್ರೀನಾಥ್ ಟಿ.ಬಿ (ಬಿಲ್ಲೆ ಸಂಖ್ಯೆ 3973) ಅವರು ನಿಗಮದಲ್ಲಿ 24 ವರ್ಷಗಳ ಸೇವೆ ಸಲ್ಲಿಸಿದ್ದು, 04.04.2023 ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಬೊಲೆರೋ ವಾಹನದೊಂದಿಗೆ ಡಿಕ್ಕಿಯಾಗಿ ಅಪಘಾತದಲ್ಲಿ ಮೃತಪಟ್ಟಿದ್ದರು. ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿರುವ ಅವರ ಕುಟುಂದವರಿಗೆ ಚೆಕ್ ವಿತರಿಸಲಾಯಿತು.
ನಿಗಮದಲ್ಲಿ ಒಂದು ಕೋಟಿ ರೂ. ಅಪಘಾತ ವಿಮೆ ಜಾರಿಯಾದ ಬಳಿಕ ಈವರೆಗೂ 9 ಮಂದಿ ನೌಕರರು ಮೃತಪಟ್ಟಿದ್ದು, ಅವರ ಕುಟುಂಬವರಿಗೆ ತಲಾ ಒಂದು ಕೋಟಿ ರೂ. ಚೆಕ್ಗಳನ್ನು ನೀಡಲಾಗಿದೆ.
50 ಲಕ್ಷ ರೂ. ವಿಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಅವರಿಂದ ಮಾಡಿಕೊಂಡ ಒಡಂಬಡಿಕೆಯ 50 ಲಕ್ಷ ರೂಪಾಯಿ ಸೇರಿ ಒಟ್ಟು 1 ಕೋಟಿ ರೂಪಾಯಿ ಅಪಘಾತ ವಿಮೆ ನೀಡುವ ಯೋಜನೆಯನ್ನು ಕೆಎಸ್ಆರ್ಟಿಸಿ ರೂಪಿಸಿದೆ.
ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ಗೆ ಈ ವಿಮಾ ಯೋಜನೆಗಾಗಿ ಸಿಬ್ಬಂದಿ ಪ್ರತಿ ತಿಂಗಳು 62.50, ಜಿ.ಎಸ್.ಟಿ ಸೇರಿದಂತೆ ವಾರ್ಷಿಕ 885 ರೂ. ಪ್ರೀಮಿಯಂ ಪಾವತಿಸುತ್ತಿದ್ದಾರೆ.
ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 50 ಲಕ್ಷ ರೂ.ಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ. ಇನ್ನು ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವಿಕಲರಾದರೆ 50 ಲಕ್ಷ ರೂ.ಗಳ ವಿಮಾ ಪರಿಹಾರ ದೊರೆಯಲಿದೆ.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಡಾ. ನಂದಿನಿ ದೇವಿ. ಕೆ, ಭಾ.ಆ.ಸೇ, ನಿರ್ದೇಶಕರು (ಸಿ ಮತ್ತು ಜಾ), ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.