ಬೆಂಗಳೂರು: ಸಾರಿಗೆ ನಿಗಮದ ಇತಿಹಾಸದಲ್ಲಿಯೇ ಕೆಎಸ್‌ಆರ್‌ಸಿಯು ನಿನ್ನೆ (ಅ.10) 22.64 ಕೋಟಿ ರೂಪಾಯಿ ಅತ್ಯಧಿಕ ಆದಾಯ ದಾಖಲಿಸಿದ್ದು, ಇದಕ್ಕೆ ಕಾರಣರಾದ ತಮ್ಮೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರದ ಮೂಲಕ ಅಭಿನಂದನೆ ತಿಳಿಸಿರುವ ಎಂಡಿ, ನಿಗಮವು ತನ್ನ ಸುದೀರ್ಘ ಸಾರಿಗೆ ಇತಿಹಾಸದಲ್ಲಿ ಸಾರ್ವಜನಿಕರಿಗೆ ಸಮಗ್ರ ಸಾರಿಗೆ ಸೇವೆಯನ್ನು ಒದಗಿಸಿರುವುದರ ಜೊತೆಗೆ, ರಾಜ್ಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಲಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ ಎಂದು ಶ್ಲಾಘಿಸಿದ್ದಾರೆ.
ಅಲ್ಲದೆ ಸಾರಿಗೆ ಸೇವೆಯು ಜನರಿಗೆ ಒದಗಿಸಬೇಕಾಗಿರುವ ಅಗತ್ಯ ಮೂಲಭೂತ ಸೌಕರ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿ ನಾಡಹಬ್ಬ ದಸರಾ ಸಂಭ್ರಮದಲ್ಲಿ, ನಿಗಮದ ಎಲ್ಲ ವಾಹನಗಳನ್ನು ಸುಸ್ಥಿಯಲ್ಲಿಟ್ಟುಕೊಂಡು, ಪ್ರಯಾಣಿಕರ ಬೇಡಿಕೆಗನುಗುಣವಾಗಿ ಹೆಚ್ಚು ಹೆಚ್ಚು ಅನುಸೂಚಿಗಳನ್ನು ಹಾಗೂ ವಿಶೇಷ ದಸರಾ ಪ್ಯಾಕೇಜ್ ಪ್ರವಾಸಗಳನ್ನು ಸಕಾಲದಲ್ಲಿ ಕಾರ್ಯಾಚರಣೆ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಉತ್ತಮ ಸಾರಿಗೆ ಸೌಲಭ್ಯಗಳನ್ನು ಒದಗಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಇನ್ನು ಕೋವಿಡ್ ಕಾರಣದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ನಿಗಮಕ್ಕೆ ಯಾವುದೇ ಹೊಸ ಬಸ್‌ಗಳ ಸೇರ್ಪಡೆಯಾಗಿಲ್ಲ ಹಾಗೂ ಸಿಬ್ಬಂದಿಗಳ ವರ್ಗಾವಣೆ ನಿವೃತ್ತಿಯಿಂದ ತೆರವಾದ ಸ್ಥಳಗಳಿಗೆ ಹೊಸ ನೇಮಕಾತಿಯೂ ಕೂಡ ಆಗಿಲ್ಲ. ಆದಾಗ್ಯೂ ನಿಗಮವು ನಿನ್ನೆ 22.64 ಕೋಟಿ ರೂ.ಗಳ ಅತಿ ಹೆಚ್ಚಿನ ಸಾರಿಗೆ ಆದಾಯವನ್ನು ಗಳಿಸಲು ಸಾಧ್ಯವಾಗಿರುವುದು ಸಮಸ್ತ ಸಿಬ್ಬಂದಿಗಳ ಅವಿರತ ಪರಿಶ್ರಮ, ದಕ್ಷತೆ ಹಾಗೂ ಬದ್ಧತೆಗೆ ಸಂದ ಪ್ರತಿಫಲವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಈ ಮೂಲಕ ಕೆಎಸ್‌ಆರ್‌ಸಿಯು ಮತ್ತೊಮ್ಮೆ ಜನರ ಜೀವನಾಡಿಯೆಂಬುದನ್ನು ನೌಕರರು ಸಾಬೀತು ಪಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ನಿಗಮದ ಶ್ರೇಯೋವೃದ್ಧಿಗಾಗಿ ನಾವೆಲ್ಲರೂ ಮತ್ತಷ್ಟು ಉತ್ಸಾಹ ಹಾಗೂ ಕರ್ತವ್ಯ ತತ್ವರತೆಯಿಂದ ದುಡಿಯುವ ಅಭಿಲಾಷೆ ಹೊಂದೋಣ ಎಂದು ಸಲಹೆ ನೀಡಿದ್ದಾರೆ.
ಇನ್ನು ನಿಗಮಕ್ಕೆ ದಾಖಲೆಯ ಆದಾಯಗಳಸಲು ಶ್ರಮಿಸಿರುವ ಪ್ರತಿಯೊಬ್ಬ ಅಧಿಕಾರಿ /ಸಿಬ್ಬಂದಿಗಳು ಮತ್ತು ಅವರ ಕುಟುಂಬ ವರ್ಗದವರಿಗೆ ಈ ಸುಸಂದರ್ಭದಲ್ಲಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಎಂಡಿ ಅನ್ಬುಕುಮಾರ್ ಮತ್ತು ನಿಗಮದ ಅಧ್ಯಕ್ಷ ಚಂದ್ರಪ್ಪ ಕೂಡ ತಿಳಿಸಿದ್ದಾರೆ.