ಬಸ್‌ನಲ್ಲಿ ವಾರಸುದಾರರಿಲ್ಲದ ಮದ್ಯದ ಬಾಕ್ಸ್ : ನಿರ್ವಾಹಕನಿಗೆ ಅಮಾನತು ಶಿಕ್ಷೆ ಕೊಟ್ಟ KSRTC – ತಡೆಯಾಜ್ಞೆ ನೀಡಿದ ಹೈ ಕೋರ್ಟ್
ಬೆಂಗಳೂರು : ಸಾರಿಗೆ ಸಂಸ್ಥೆಯ ವಾಹನದಲ್ಲಿ ವಾರಸುದಾರರಿಲ್ಲದ ಒಂದು ಬಾಕ್ಸ್ ಮದ್ಯದ ಬಾಟಲಿ ತೆಗೆದುಕೊಂಡು ಹೋಗುತ್ತಿದ್ದು, ಅದನ್ನು ಪರಿಶೀಲನೆ ಮಾಡುವಲ್ಲಿ ನಿರ್ವಾಹಕ ವಿಫಲನಾಗಿದ್ದಾನೆ ಎಂಬ ಆರೋಪದ ಮೇರೆಗೆ ನಿರ್ವಾಹಕನನ್ನು ಅಮಾನತು ಮಾಡಿದ ಸಂಸ್ಥೆಯ ಡಿಸಿ ಆದೇಶಕ್ಕೆ ಹೈಕೋರ್ಟ್ ಮಂಗಳವಾರ (ಆ.23-2022) ತಡೆಯಾಜ್ಞೆ ನೀಡಿದೆ.
ರಾಮನಗರ ವಿಭಾಗದ ಮಾಗಡಿ ಘಟಕದ ಸುರೇಶ್ ಮಲ್ಲಣ್ಣ ಎಂಬ ಚಾಲಕ ಕಂ ನಿರ್ವಾಹಕರನ್ನು ನಿಗಮದ ತನಿಖಾಧಿಕಾರಿಗಳು ವಾಹನವನ್ನು ತನಿಖೆ ಮಾಡಿ, ಆತನ ವಿರುದ್ಧ ಮದ್ಯದ ಬಾಟಲಿ ಸಾಗಿಸಲು ಅವಕಾಶ ಮಾಡಿಕೊಟ್ಟ ಆರೋಪ ಮಾಡಿದ ವರದಿ ಸಲ್ಲಿಸಿದರು. ಆ ವರದಿ ಆಧಾರ ಮೇಲೆ ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತು ಮಾಡಿದ್ದರು.
ಅಮಾನತು ಮಾಡಿರುವುದರ ವಿರುದ್ಧ ಚಾಲಕ ಕಂ ನಿರ್ವಾಹಕ ಸುರೇಶ್ ಮಲ್ಲಣ್ಣ ಅವರು ಹೈ ಕೋರ್ಟ್ ಮೆಟ್ಟಿಲೇರಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಪೀಠ ಅಮಾನತು ಆದೇಶಕ್ಕೆ ಇಂದು ತಡೆನೀಡಿದೆ.
ಏನಿದು ಪ್ರಕರಣ: ಮಾಗಡಿ ಘಟಕದ ಮಾರ್ಗ ಸಂಖ್ಯೆ 115 ಎಬಿ, ಬೆಂಗಳೂರು- ತಿರುವಣ್ಣಾಮಲೈ ಮಾರ್ಗದಲ್ಲಿ ಇದೇ 2022ರ ಮೇ-25 ರಂದು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಾತುರು ಬಳಿ ನಿಗಮದ ತಪಾಸಣಾ ಅಧಿಕಾರಿಗಳು ವಾಹನ ತಪಾಸಣೆ ಮಾಡಿದಾಗ ವಾರಸುದಾರರು ಇಲ್ಲದ ಒಂದು ಮದ್ಯದ ಬಾಕ್ಸ್ ಪತ್ತೆಯಾಗಿತ್ತು.
ತನಿಖಾಧಿಕಾರಿಗಳು ತಪಾಸಣೆ ಮಾಡಿದಾಗ ಅದರಲ್ಲಿ 180 ಎಂಎಲ್ ಒರಿಜಿನಲ್ ಚಾಯ್ಸ್ ವಿಸ್ಕಿ ಬಾಟಲ್ ಇತ್ತು. ಆ ಬಾಕ್ಸ್ ಅನ್ನು ವಶಕ್ಕೆ ಪಡೆದ ತನಿಖಾಧಿಕಾರಿಗಳು ನಿರ್ವಾಹಕನಿಗೆ ಆಪಾದನಾ ಪತ್ರವನ್ನು ಜಾರಿ ಮಾಡಿದ್ದರು. ಈ ಸಂಬಂಧ ಬೆಂಗಳೂರು ಕೇಂದ್ರೀಯ ವಿಭಾಗದ ತನಿಖಾಧಿಕಾರಿಗಳು ವರದಿ ನೀಡಿದ್ದರು.
ತನಿಖಾಧಿಕಾರಿಗಳ ವರದಿಯನ್ನಾಧರಿಸಿ, ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇದೇ 2022ರ ಜುಲೈ-7 ರಂದು ನಿರ್ವಾಹಕ ಸುರೇಶ್ ಮಲ್ಲಣ್ಣನವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ತನ್ನದಲ್ಲದ ತಪ್ಪಿಗೆ ಅಮಾನತುಗೊಳಿಸಿದ ಸಾರಿಗೆ ನಿಗಮದ ಉನ್ನತ ಅಧಿಕಾರಿಗಳ ಅಮಾನತು ಆದೇಶದಿಂದ ನೊಂದ ಸುರೇಶ್ ಮಲ್ಲಣ್ಣ ಅದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿವಿಷನ್ ಪಿಟಿಸನ್ ಸಂಖ್ಯೆ: 16445/2022 ರಂತೆ ಪ್ರಕರಣ ದಾಖಲಿಸಿದರು. ಅದರಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರರನ್ನು ಎದುರುದಾರರನ್ನಾಗಿ ಮಾಡಲಾಗಿದೆ.
ಪ್ರಕರಣವನ್ನು ಇಂದು ( ಮಂಗಳವಾರ) ಕೈಗೆತ್ತಿಕೊಂಡ ಹೈಕೋರ್ಟ್ ಕೊಠಡಿ ಸಂಖ್ಯೆ 15 ರಲ್ಲಿ ನ್ಯಾಯಾಧೀಶ ಸುರಾಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಸುರೇಶ್ ಮಲ್ಲಣ್ಣ ಅವರ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡುವ ಜತೆಗೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು.
ಪ್ರಕರಣ ಸಂಬಂಧ ನಿರ್ವಾಹಕ ಸುರೇಶ್ ಮಲ್ಲಣ್ಣ ಅವರ ಪರ ವಕೀಲ ಎಚ್. ಬಿ. ಶಿವರಾಜ್ ವಾದ ಮಂಡಿಸಿದರು.
ಅಧಿಕಾರಿಗಳು ತಮಗೆ ಸಿಕ್ಕಿರುವ ಕಾನೂನಿನ ಹಕ್ಕನ್ನು ವಿಮರ್ಶೆಗೆ ಒಳಪಡಿಸದೆ ಏಕಾಏಕಿ ಯಾರೋ ಅಧಿಕಾರಿಗಳು ಕೊಟ್ಟ ವರದಿ ಆಧಾರದ ಮೇರೆಗೆ ಚಾಲಕ/ನಿರ್ವಾಹಕರನ್ನು ಅಮಾನತು ಮಾಡುವುದು ಎಷ್ಟು ಸರಿ. ಬಳಿಕ ಕೋರ್ಟ್ ಮುಂದೆ ತಲೆತಗ್ಗಿಸಿ ನಿಂತು ವಾಪಸ್ ಬರುವುದು ಸಂಸ್ಥೆಗೆ ಅಗೌರವತಂದಂತೆ ಆಗುವುದಿಲ್ಲವೇ?
ಈ ರೀತಿ ಕೋರ್ಟ್‌ಮುಂದೆ ಬೆತ್ತಲಾಗುವುದು, ಚೀಮಾರಿ ಹಾಕಿಸಿಕೊಳ್ಳುವುದಕ್ಕೂ ಮುನ್ನ ನಾವು ನೌಕರರ ವಿರುದ್ಧ ಆದೇಶ ಹೊರಡಿಸುವುದು ಎಷ್ಟರ ಮಟ್ಟಿಗೆ ನ್ಯಾಯಾಲಯದಲ್ಲಿ ನಿಲ್ಲುತ್ತದೆ ಎಂಬುದರ ಬಗ್ಗೆಯೂ ಯೋಚಿಸಬೇಕಲ್ಲವೇ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.