ಬೆಂಗಳೂರು: ಸಾರಿಗೆ ನೌಕರರು ಪ್ರಮುಖವಾಗಿ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಸಮಾನ ಕೆಲಸಕ್ಕೆ ಸರಿಸಮಾನ ವೇತನ ನೀಡುವಂತೆ ಒತ್ತಾಯಿಸಿ ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ಪ್ರತಿಭಟನೆ ಮಾಡಿ, ಆ ವೇಳೆ ಕೆಲ ನೌಕರರು ವಜಾ, ಅಮಾನತಿಗೆ ಒಳಗಾಗಿ, ಉಳಿದವರಿಗೆ ಭಯವನ್ನುಂಟು ಮಾಡಿ ಒಂದಷ್ಟು ವೇತನ ಪರಿಷ್ಕರಣೆ ಮಾಡಲಾಗುತ್ತಿದೆ.
ಇದು ಈ ಪ್ರಸ್ತುತ ದಿನಮಾನದಲ್ಲೂ ನಡೆದುಕೊಂಡು ಬರುತ್ತಿದೆ. ಆದರೆ ಇನ್ನುಳಿದ ನಿಗಮ ಮಂಡಳಿಗಳಲ್ಲಿ ನೌಕರರು ಮತ್ತು ಅಧಿಕಾರಿಗಳು ಎಂಬ ತಾರತಮ್ಯತೆ ಇಲ್ಲದೆ ಎಲ್ಲರಿಗೂ ಸರಿ ಸಮಾನವಾದ ವೇತನ ಪರಿಷ್ಕರಣೆಯಾಗುತ್ತಿದೆ.
ಹೀಗಾಗಿ ಬಹುತೇಕ ಎಲ್ಲ ನಿಗಮ ಮಂಡಳಿಗಳಲ್ಲಿ ನೌಕರರು ಮತ್ತು ಅಧಿಕಾರಿಗಳ ನಡುವೆ ಯಾವುದೇ ಕಿತ್ತಾಟಗಳು ನಡೆಯುವುದಿಲ್ಲ. ಬದಲಿಗೆ ಸೌಹಾರ್ದತೆಯ ವಾತವಾರಣ ನಿರ್ಮಾಣಗೊಂಡು ಎಲ್ಲರೂ ಒಂದೇ ಕುಟುಂಬದಂತೆ ಇದ್ದಾರೆ.
ಆದರೆ ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು ಮತ್ತು ನೌಕರರಲ್ಲಿ ವೇತನ ಪರಿಷ್ಕರಣೆ ಮತ್ತು ಮುಂಬಡ್ತಿಯಲ್ಲಿ ತಾರತಮ್ಯತೆ ಇರುವುದರಿಂದ ಇವರ ನಡುವಿನ ಸಂಬಂಧ ಹಾವು ಮುಂಗುಸಿಯಂತೆ ಇದೆ. ಅಂದರೆ ಚಾಲನಾ ಸಿಬ್ಬಂದಿಗಳಾದ ಚಾಲಕ ಮತ್ತು ನಿರ್ವಾಹಕರು, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಮಾತ್ರ ಸರಿಯಾದ ಸಮಯಕ್ಕೆ ಮುಂಬಡ್ತಿಯಾಗದೆ ಮೂಲ ವೇತನದಲ್ಲಿ ಅಜಗಜಾಂತರ ವ್ಯತ್ಯಾಸಗಳಾಗುತ್ತಿದೆ.
ಇದರಿಂದ ಸಾರಿಗೆ ನಿಗಮಗಳ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಿಗುವ ವೇತನಕ್ಕೂ ಚಾಲನಾ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಸಿಗುವ ವೇತನಕ್ಕೂ ವ್ಯತ್ಯಾಸ ಉಂಟಾಗುತ್ತದೆ. ಕಚೇರಿಯ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಅಂದರೆ 5 ವರ್ಷಕ್ಕೊಮ್ಮೆ ತಪ್ಪದೆ ಮುಂಬಡ್ತಿ ಸಿಗುತ್ತದೆ ಆದರೆ, ಚಾಲನಾ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಈ ಮುಂಬಡ್ತಿ ಕಳೆದ 15-22 ವರ್ಷಗಳಿಂದ ಕೊಟ್ಟೆ ಇಲ್ಲ.
ಹೀಗಾಗಿ ಚಾಲನಾ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳ ಮೂಲ ವೇತನ ಈ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮೂಲ ವೇತನಕ್ಕೂ ವ್ಯತ್ಯಾಸವಾಗಿರುತ್ತದೆ. ಇನ್ನು ಅಧಿಕಾರಿಗಳ ಮಟ್ಟದಲ್ಲಿ ಕೇಳಲೇ ಬೇಕಿಲ್ಲ ಅವರಿಗೆ ಯಾವುದೇ ಅಡೆತಡೆಗಳಿಲ್ಲದೆ, ಮುಂಬಡ್ತಿ ಕಾಲಕಾಲಕ್ಕೆ ತಕ್ಕಂತೆ ಆಗುತ್ತಲೇ ಇರುವುದರಿಂದ ವೇತನ ಪರಿಷ್ಕರಣೆ ವೇಳೆ ಯಾವುದೇ ಚಕಾರವೆತ್ತದೆ ಎಲ್ಲದಕ್ಕೂ ಒಪ್ಪಿಕೊಳ್ಳುತ್ತಾರೆ.
ಆದರೆ, ಕಾಲಕಾಲಕ್ಕೆ ತಕ್ಕಂತೆ ಮುಂಬಡ್ತಿ ಸಿಗದೆ, ಇತ್ತ ಮೂಲ ವೇತನದಲ್ಲೂ ಮೋಸವಾಗುತ್ತಿರುವುದರಿಂದ ಸಾರಿಗೆಯ ಚಾಲನಾ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳು ಹೋರಾಟಕ್ಕೆ ಇಳಿದು ಈ ತಾರತಮ್ಯತೆಯನ್ನು ನಿವಾರಿಸುವಂತೆ ಒತ್ತಾಯಿಸುತ್ತಾರೆ. ಅದರಲ್ಲೂ ಭದ್ರತಾ ಸಿಬ್ಬಂದಿ ಹೋರಾಟಕ್ಕೆ ಕೈ ಜೋಡಿಸದೆ ಅಧಿಕಾರಿಗಳು ಹೇಳಿದಂತೆ ಕೇಳಿಕೊಂಡು ತಟಸ್ಥರಾಗಿ ಬಿಡುತ್ತಾರೆ.
ಇನ್ನು ಅಧಿಕಾರಿಗಳು ನಮಗೆ ಕಾಲಕಾಲಕ್ಕೆ ಸಿಗಬೇಕಾದ ಎಲ್ಲವೂ ಸಿಗುತ್ತಿದೆಯಲ್ಲ ಎಂದು ಹೋರಾಟಕ್ಕೆ ಇಳಿಯುವ ಚಾಲನಾ, ತಾಂತ್ರಿಕ ಸಿಬ್ಬಂದಿಗಳನ್ನು ಮನಸೋ ಇಚ್ಛೆ ವಜಾ, ಅಮಾನತು, ವರ್ಗಾವಣೆ ಮಾಡಿ ದರ್ಪ ಮೆರೆಯುತ್ತಾರೆ.
ಇದನ್ನು ಪ್ರಶ್ನಿಸಬೇಕಾದ ನೌಕರರ ಪರ ಕೆಲ ಸಾರಿಗೆ ಸಂಘಟನೆಗಳ ಮುಖಂಡರು ಅಧಿಕಾರಗಳ ನಡೆಯನ್ನೇ ಸಮರ್ಥಿಸಿಕೊಂಡು ನೌಕರರನ್ನು ಬೀದಿಗೆ ದಬ್ಬುವ ಕೆಲಸ ಮಾಡುತ್ತಿದ್ದಾರೆ. ಇನ್ನು ಬಲ್ಲ ಮೂಲಗಳ ಪ್ರಕಾರ ಅಧಿಕಾರಿಗಳಿಗೆ ಕೆಲ ಸಾರಿಗೆ ನೌಕರರ ಪರ ಸಂಘಟನೆಗಳ ಮುಖಂಡರೆ ನೌಕರರ ವಿರುದ್ಧ ಯಾವ ಯಾವ ನಿಯಮಗಳಡಿ ಕ್ರಮ ಜರುಗಿಸಲು ಅವಕಾಶವಿದೆ ಎಂಬುದರ ಬಗ್ಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ ನೌಕರರ ವಜಾ, ಅಮಾನತಿಗೆ ಕಾರಣರಾಗಿದ್ದಾರೆ. ಈಗಲೂ ಅದನ್ನೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ರಾಜ್ಯದ ಇತರ ನಿಗಮ ಮಂಡಳಿಗಳ ಅಧಿಕಾರಿಗಳು ಮತ್ತು ನೌಕರರ ನಡುವೆ ಇರುವಂತೆ ಯಾವುದೇ ಸೌಹಾರ್ದಯುತ ಸಂಬಂಧ ಬೆಳೆಯುವುದಕ್ಕೆ ಈ ಕೆಲ ಸಂಘಟನೆಗಳ ಇಬ್ಬಗೆಯಾ ನೀತಿಯೇ ಕಾರಣ ಎಂದು ಹೇಳಲಾಗುತ್ತಿದೆ. ಈ ಸಂಘಟನೆಗಳ ಮುಖಂಡರು ನೌಕರರಿಗೆ ಕಾಲಕಾಲಕ್ಕೆ ಸಿಗಬೇಕಾದ ವೇತನ ಪರಿಷ್ಕರಣೆ ಮತ್ತು ಮುಂಬಡ್ತಿಯಲ್ಲಿ ಆಗುತ್ತಿದ್ದ ಲೋಪವನ್ನು ಸರಿಪಡಿಸದೆ ಸೂಟ್‌ಕೇಸ್ ಪಡೆದು ಸುಮ್ಮನಾಗಿರುವುದರಿಂದಲೇ ಇಂದು ನೌಕರರು ವೇತನಕ್ಕಾಗಿ ಹೋರಾಟ ಮಾಡಿ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ.
ಇನ್ನಾದರೂ ಇಂಥ ಸಂಘಟನೆಗಳ ಮುಖಂಡರನ್ನು ಬದಿಗೆ ಸರಿಸಿ ನ್ಯಾಯಯುತವಾದ ಹಕ್ಕುಗಳನ್ನು ಪಡೆಯಲು ನೌಕರರು ಪಣ ತೊಡಬೇಕಿದೆ. ಇಲ್ಲದೆ ಹೋದರೆ ಕಳೆದ 4 ದಶಕಗಳಿಂದ ಏನು ನಡೆದುಕೊಂಡು ಬಂದಿರುವ ಈ ತಾರತಮ್ಯ ನೀತಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದೆಲ್ಲವನ್ನು ಗಮನಿಸಿ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಅವರು ಈ ತಾರತಮ್ಯತೆ ಸರಿಪಡಿಸಿ ನಿಗಮಗಳಲ್ಲಿ ನೌಕರರು ಮತ್ತು ಅಧಿಕಾರಿಗಳ ನಡುವೆ ಇರುವ ಮಲತಾಯಿ ಧೋರಣೆಯನ್ನು ದೂರಮಾಡಬೇಕಿದೆ.